ಶಿರಾಡಿ ಘಾಟ್‌ನಲ್ಲಿ ಅಪರಿಚಿತ ಮಹಿಳೆ ಕೊಳೆತ ಶವಪತ್ತೆ

ಶಿರಾಡಿ ಘಾಟ್‌ನಲ್ಲಿ ಅಪರಿಚಿತ ಮಹಿಳೆ ಕೊಳೆತ ಶವಪತ್ತೆ

ನೇಸರ ಡಿ.28: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನ ರಾಜ್‌ಘಾಟ್ ಸಮೀಪ ಕೆಂಪುಹೊಳೆ ಅರಣ್ಯದಲ್ಲಿ ಮಹಿಳೆಯೋರ್ವರ ಶವ ಕೊಳೆತ ರೀತಿಯಲ್ಲಿ ದ.28ರಂದು ಬೆಳಿಗ್ಗೆ ಪತ್ತೆಯಾಗಿದೆ.ಮೃತ ಮಹಿಳೆಯ ಪ್ರಾಯ 30 ರಿಂದ 35 ಎಂದು ಅಂದಾಜಿಸಲಾಗಿದ್ದು ಮಹಿಳೆಯ ಕೊಳೆತ ಶವ ಮಕಾಡೆ ಮಲಗಿದ ರೀತಿಯಲ್ಲಿ ಪತ್ತೆಯಾಗಿದೆ. ನಂದೀಶ್ ಎಂಬವರು ಗುಂಡ್ಯಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದವರು ಶಿರಾಡಿ ಘಾಟ್‌ನ ರಾಜ್‌ಘಾಟ್ ಸಮೀಪ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬೈಕ್ ನಿಲ್ಲಿಸಿ ಪಕ್ಕ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಕಂಡುಬಂದಿದೆ. ಈ ಬಗ್ಗೆ ನಂದೀಶ್ ರವರು ನೀಡಿದ ದೂರಿನಂತೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಸಕಲೇಶಪುರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮೃತ ಮಹಿಳೆ 5 ಅಡಿ ಎತ್ತರವಿದ್ದು ದುಂಡು ಮುಖ, ತಲೆಯಲ್ಲಿ ಕಪ್ಪು ಕೂದಲು ಇದೆ. ಕೆಂಪು ಬಣ್ಣದ ಹೂವು ಇರುವ ಚೂಡಿದಾರ್ ಟಾಪ್ ಹಾಗೂ ಕಡು ನೀಲಿ ಬಣ್ಣದ ಲೆಗ್ಗಿನ್ಸ್ ಪ್ಯಾಂಟ್ ಧರಿಸಿದ್ದಾರೆ. ಬಲ ಗೈ ಮೇಲೆ “ಮೂರ್ತಿ” ಎಂಬ ಹೆಚ್ಚೆ ಗುರುತು ಇದೆ. ವಾರಸುದಾರರು ಇದುವರೆಗೂ ಪತ್ತೆಯಾಗಿರುವುದಿಲ್ಲ. ಮೃತ ಮಹಿಳೆಯ ಹೋಲಿಕೆಯುಳ್ಳ ಯಾವುದಾದರೂ ಹೆಂಗಸು ಕಾಣೆಯಾದ ಪ್ರಕರಣಗಳಿದ್ದಲ್ಲಿ ಸಕಲೇಶಪುರ ಗ್ರಾಮಾಂತರ ಠಾಣೆ ಫೋನ್ 08173-245183, ಮೊಬೈಲ್ ನಂ. 9480804761ಗೆ ಸಂಪರ್ಕಿಸುವಂತೆ ಪ್ರಕಟಣೆ ನೀಡಲಾಗಿದೆ.

Leave a Reply

You May Have Missed

error: Content is protected !!