ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು- ಬಾಲ್ಯ ಸ್ನೇಹಿತೆ ಮುಂದೆಯೇ ದುರ್ಘಟನೆ

ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು- ಬಾಲ್ಯ ಸ್ನೇಹಿತೆ ಮುಂದೆಯೇ ದುರ್ಘಟನೆ

ಉಳ್ಳಾಲ: ಸ್ನೇಹಿತೆ ಜೊತೆಗೆ ವಿಹಾರಕ್ಕೆ ಬಂದಿದ್ದ ಯುವತಿ ಸಮುದ್ರಪಾಲಾದ ಘಟನೆ ಸೋಮೇಶ್ವರ ರುದ್ರಪಾದೆಯಲ್ಲಿ ಇಂದು ನಡೆದಿದೆ.
ಮಂಗಳೂರಲ್ಲಿ ಬಿಕಾಂ ಕಲಿಯುತ್ತಿರುವ ಮೂಲತ ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲೂಕು ತೆಗ್ಗಿ ಗ್ರಾಮದ ನಿವಾಸಿ ಕಾವೇರಿ(20)ಮೃತ ಪಟ್ಟ ಯುವತಿ.

ಕಾವೇರಿ ನಿನ್ನೆ ಹುಟ್ಟು ಹಬ್ಬ ಆಚರಿಸಿದ್ದು ಇಂದು ತನ್ನ ಬಾಲ್ಯ ಸ್ನೇಹಿತೆಯೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದಳು. ಸ್ನೇಹಿತೆಯರಿಬ್ಬರು ಸಮುದ್ರ ತೀರದ ರುದ್ರ ಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಕಾವೇರಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಈಜು ರಕ್ಷಕ ಸಿಬ್ಬಂದಿ ಮೋಹನ್ ಚಂದ್ರ, ಸ್ಥಳೀಯ ಮೀನುಗಾರರಾದ ಯೋಗೀಶ್ , ಪ್ರವೀಣ್, ಸೋಮೇಶ್ವರ ದೇವಸ್ಥಾನದ ಸಿಬ್ಬಂದಿ ವಿನಾಯಕ್ ಮತ್ತು ಸ್ಥಳೀಯರು ಸೇರಿ ಸಮುದ್ರದಲ್ಲಿ ಈಜಾಡಿ ಕಾವೇರಿಯನ್ನ ದಡಕ್ಕೆ ಎಳೆ ತಂದರೂ ಅಷ್ಟರಲ್ಲಿ ಕಾವೇರಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಕಾವೇರಿ ಪೋಷಕರು ಕೂಲಿ ಕೆಲಸಗಾರರಾಗಿದ್ದು ಮಂಗಳೂರಿನ ಉರ್ವ ಸ್ಟೋರಲ್ಲಿ ಕಳೆದ ಅನೇಕ ವರುಷಗಳಿಂದ ನೆಲೆಸಿದ್ದು ತಮ್ಮ ಏಕೈಕ ಮಗಳನ್ನ ಕಷ್ಟ ಪಟ್ಟು ಮಂಗಳೂರು ನಗರದ ಸ್ವಸ್ಥಿಕ್ ಕಾಲೇಜಲ್ಲಿ ಬಿಕಾಂ ಓದಿಸುತ್ತಿದ್ದರು. ಪ್ರತಿಭಾನ್ವಿತೆಯಾಗಿದ್ದ ಕಾವೇರಿ ಬಿಕಾಂ ವ್ಯಾಸಂಗದ ಜೊತೆಗೆ ಸಿಎ ಕೂಡ ಅಧ್ಯಯನ ನಡೆಸುತ್ತಿದ್ದರು.

ಮೃತ ಕಾವೇರಿ ಜೊತೆ ಬಂದಿದ್ದ ಬಾಲ್ಯ ಸ್ನೇಹಿತೆ ಕೂಡ ಮಂಗಳೂರು ನಗರದ ಕಾಲೇಜೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ.

ವಿಚಾರ ತಿಳಿದು ಸ್ಥಳಕ್ಕೆ ಬಂದಿದ್ದ ಮೃತ ಕಾವೇರಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Leave a Reply

You May Have Missed

error: Content is protected !!