ಬೈಕ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ; ದೈವಸ್ಥಾನಕ್ಕೆ ಹರಕೆ ಹೇಳಲು ಹೊರಟಿದ್ದ ವೇಳೆ ಕಣ್ಣೆದುರೇ ಬೈಕ್ ಕಳ್ಳ ಸಿಕ್ಕಿಬಿದ್ದ!

ಬೈಕ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ; ದೈವಸ್ಥಾನಕ್ಕೆ ಹರಕೆ ಹೇಳಲು ಹೊರಟಿದ್ದ ವೇಳೆ ಕಣ್ಣೆದುರೇ ಬೈಕ್ ಕಳ್ಳ ಸಿಕ್ಕಿಬಿದ್ದ!

ಸುಳ್ಯ: ಸುಳ್ಯ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕನ್ನು ನಕಲಿ ಕೀ ಮೂಲಕ ಕದ್ದು, ಮರುದಿನ ಬೈಕ್‌ ಕಳಕೊಂಡವರೆದುರೇ ಸಾಗುತ್ತಿರುವಾಗ ಸಿಕ್ಕಿ ಬಿದ್ದ ಕಳ್ಳ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಅದೂ ಬೈಕ್ ಕಳೆದುಕೊಂಡ ವ್ಯಕ್ತಿ ಈ ಬಗ್ಗೆ ದೈವಸ್ಥಾನದಲ್ಲಿ ಹರಕೆ ಹೇಳಲು ಹೊರಟ ವೇಳೆ! ಬೈಕ್ ಕಳ್ಳ ಬೈಕ್ ನೊಂದಿಗೆ ಪರಾರಿಯಾಗಲು ಯತ್ನಿಸಿದಾಗ ಊರವರು ಅಟ್ಟಿಸಿಕೊಂಡು ಹೋಗಿದ್ದು ಕೊನೆಗೆ ಆತ ಕಲ್ಲುಗುಂಡಿ ಹೊರಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಕಂಬಿ ಎಣಿಸುತ್ತಿದ್ದಾನೆ.

ಮೈಸೂರಿನ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿರುವ ನಿರಂಜನ್ ಎಂಬಾತನೇ ಕಳ್ಳತನವೆಸಗಿದ ಆರೋಪಿ ಎಂದು ತಿಳಿದು ಬಂದಿದ್ದು ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಉಬರಡ್ಕದ ಕಾರ್ತಿಕ್‌ ಸುಳ್ಯಕೋಡಿ ಎಂಬವರು ಪುತ್ತೂರಿನಲ್ಲಿ ಕ್ಯಾಂಪ್ಕೋ ಉದ್ಯೋಗಿಯಾಗಿದ್ದು, ಜು.25ರಂದು ಸಂಜೆ ತನ್ನ ಬೈಕ್‌ನ್ನು ಸುಳ್ಯ ಸರಕಾರಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿ ರಾತ್ರಿ ಪಾಳಿಯ ಕೆಲಸಕ್ಕೆ ಬಸ್ ನಲ್ಲಿ ಪುತ್ತೂರಿಗೆ ತೆರಳಿದ್ದರು. ಮರುದಿನ ಬೆಳಗ್ಗೆ ಅವರು ಪುತ್ತೂರಿನಿಂದ ಬಸ್‌ನಲ್ಲಿ ಹಿಂತಿರುಗಿ ಉಬರಡ್ಕಕ್ಕೆ ಹೋಗಲೆಂದು ಬಂದಾಗ ನಿಲ್ಲಿಸಿದ ಸ್ಥಳದಲ್ಲಿ ಬೈಕ್‌ ಇರಲಿಲ್ಲ. ಪೊಲೀಸರಿಗೆ ವಿಷಯ ತಿಳಿಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕೆಂಪು ಜಾಕೆಟ್‌ ಮತ್ತು ಖಾಕಿ ಪ್ಯಾಂಟ್‌ ಧರಿಸಿದ ವ್ಯಕ್ತಿಯೊಬ್ಬ ನಕಲಿ ಕೀ ಬಳಸಿ ಬೈಕ್‌ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬಂತು.

ಹರಕೆ ಹೇಳಲು ಹೊರಟಾಗ ಸಿಕ್ಕ ಕಳ್ಳ!
ಜು. 27ರಂದು ಬೆಳಗ್ಗೆ ಕಾರ್ತಿಕ್‌ ಅವರು ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಜತೆ ಕಾರಲ್ಲಿ ಸುಳ್ಯದ ಕಡೆ ಬಂದು ಬೈಕ್‌ ಕಳವಾದ ಬಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಹರಕೆ ಹೇಳಿಕೊಳ್ಳಲು ಮುಖ್ಯ ರಸ್ತೆ ಕಡೆ ತಲುಪಿದಾಗ ಕೆಂಪು ಜಾಕೆಟ್‌, ಖಾಕಿ ಪ್ಯಾಂಟ್‌ ಧರಿಸಿದ ವ್ಯಕ್ತಿ ಬೈಕ್‌ನಲ್ಲಿ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಹೋಗುವುದು ಕಂಡಿತು. ಕೂಡಲೇ ಇದು ತನ್ನದೇ ಬೈಕ್ ಎಂಬುದನ್ನು ಗುರುತು ಹಿಡಿದ ಕಾರ್ತಿಕ್‌ ಸಹೋದರ ಮತ್ತು ಗೆಳೆಯರಿಗೆ ವಿಷಯ ತಿಳಿಸಿದರು.

ಕಲ್ಲುಗುಂಡಿಯಲ್ಲಿ ಅಡ್ಡಗಟ್ಟಿದ ಪೊಲೀಸರು
ಅದರಂತೆ ಅರಂತೋಡಿನಲ್ಲಿ ಸ್ಥಳೀಯರು ಬೈಕನ್ನು ಅಡ್ಡಗಟ್ಟಿ ವಿಚಾರಿಸಲು ಮುಂದಾದರು. ಆದರೆ ಅವರನ್ನು ವಂಚಿಸಿ ಆರೋಪಿ ಸಂಪಾಜೆ ರಸ್ತೆಯಲ್ಲಿ ಮುಂದುವರಿದ. ಈ ವೇಳೆ ಸ್ಥಳೀಯರು ಕಲ್ಲುಗುಂಡಿ ಪೊಲೀಸ್‌ ಹೊರಠಾಣೆಗೆ ವಿಷಯ ತಿಳಿಸಿ ಬೈಕ್‌ನಲ್ಲಿ ಹಿಂಬಾಲಿಸಿದರು. ವಿಷಯ ತಿಳಿದ ಕಲ್ಲುಗುಂಡಿ ಹೊರಠಾಣೆ ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ತಕ್ಷಣ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡವಿರಿಸಿ ಬೈಕ್‌ ಕಳ್ಳನನ್ನು ಹಿಡಿದು ವಿಚಾರಿಸಿದ್ದಾರೆ. ಆ ವೇಳೆ ಆತ ಮೈಸೂರಿನ ಮೆಡಿಕಲ್‌ ವಿದ್ಯಾರ್ಥಿ ನಿರಂಜನ್‌ ಎಂದು ತಿಳಿದುಬಂದಿದೆ. ಬೈಕ್‌ ಕದ್ದು ಕಾಸರಗೋಡಿನಲ್ಲಿದ್ದ ತನ್ನ ಅಜ್ಜಿಯ ಮನೆಗೆ ಹೋಗಿ ಅಲ್ಲಿಂದ ಮರುದಿನ ಮೈಸೂರಿಗೆ ಹೋಗಲೆಂದು ಹಿಂತಿರುಗುವ ವೇಳೆಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

Previous post

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಟೆಂಡರ್‌ ನಡೆಸದೇ ಮಂಗಳೂರಿನ ಬಜಾರ್‌ ರಿಂದ ನಿಯಮಬಾಹಿರವಾಗಿ ದಿನಸಿ ಸಾಮಗ್ರಿ ಖರೀದಿ: ಆರೋಪ

Next post

ಗೃಹಲಕ್ಷ್ಮಿ ನೋಂದಣಿ, ರೇಷನ್‌ ಕಾರ್ಡ್‌ ತಿದ್ದುಪಡಿಗೆ ಪರದಾಟ..!! ಸರ್ವರ್‌ ಸಮಸ್ಯೆ; ಸಂಘಟನೆಗಳ ಮುಖಂಡರ ಆಕ್ರೋಶ

Leave a Reply

You May Have Missed

error: Content is protected !!