ಪಿಯು ವಿದ್ಯಾರ್ಥಿನಿಯರು ಮಲ್ಪೆಯಲ್ಲಿ ಸಮುದ್ರ ಪಾಲು, ಒಬ್ಬಳ ರಕ್ಷಣೆ..!

ಪಿಯು ವಿದ್ಯಾರ್ಥಿನಿಯರು ಮಲ್ಪೆಯಲ್ಲಿ ಸಮುದ್ರ ಪಾಲು, ಒಬ್ಬಳ ರಕ್ಷಣೆ..!

ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಶನಿವಾರ ತಡರಾತ್ರಿ ಇಬ್ಬರು ಬಾಲಕಿಯರು ನೀರುಪಾಲಾಗಿದ್ದು ಅವರಲ್ಲಿ ಒಬ್ಬಾಕೆಯನ್ನು ರಕ್ಷಿಸಲಾಗಿದ್ದು, ಒಬ್ಬಳು ಮೃತಪಟ್ಟಿದ್ದಾಳೆ.

ಈ ಬಾಲಕಿಯರು ಮೂರು ದಿನಗಳ ಹಿಂದೆ ಮಡಿಕೇರಿಯಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ಆದರೆ, ಇಲ್ಲಿಗೆ ಹೇಗೆ ಬಂದರು, ಸಮುದ್ರಕ್ಕೆ ಹಾರಿದರೇ? ಆಡುತ್ತಿದ್ದಾಗ ನೀರುಪಾಲಾದರೇ ಎಂಬ ಅಂಶ ಇನ್ನೂ ಸ್ಪಷ್ಟವಾಗಿಲ್ಲ.
ಮಡಿಕೇರಿಯ ಖಾಸಗಿ ಕಾಲೇಜೊಂದರ ಪ್ರಥಮ ಪಿಯಸಿ ವಿದ್ಯಾರ್ಥನಿಯರಾದ ಮಾನ್ಯ ಮತ್ತು ಯಶಸ್ವಿನಿ ಸಮುದ್ರದಲ್ಲಿ ನೀರುಪಾಲಾದವರು.
ಅವರಲ್ಲಿ ಮಾನ್ಯ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಮೃತಪಟ್ಟರೆ, ನೀರಿನಲ್ಲಿ ಮುಳುಗೇಳುತ್ತಿದ್ದ ಯಶಸ್ವಿನಿಯನ್ನು ರಕ್ಷಿಸಲಾಗಿದೆ.
ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಹೊರಬಂದಿದ್ದಾಳೆ.

ಶನಿವಾರ ತಡರಾತ್ರಿ ಮಲ್ಪೆ ತೀರದಲ್ಲಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗೇಳುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸಮಾಜಸೇವಕ, ಆಪತ್ಬಾಂಧವ ಈಶ್ವರ ಮಲ್ಪೆ ಅವರು ಧಾವಿಸಿದ್ದರು.
ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನೂ ಮೇಲೆತ್ತಿ ಹಾಕಿದರು. ಆದರೆ, ಅಷ್ಟು ಹೊತ್ತಿಗೇ ಮಾನ್ಯ ಉಸಿರು ಚೆಲ್ಲಿದ್ದಳು.
ಮತ್ತೊಬ್ಬಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಯಶಸ್ವಿನಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆಕೆ ನೀಡಿದ ಮಾಹಿತಿ ಪ್ರಕಾರ ಅವರಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದಾರೆ.
ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂ) ವಿದ್ಯಾರ್ಥಿಗಳಾಗಿರುವ ಇವರು ಆಪ್ತ ಗೆಳತಿಯರು. ಇವರಲ್ಲಿ ಯಶಸ್ವಿನಿ ಮನೆ ಬಿಟ್ಟು ಹೊರಟಾಗ ಮಾನ್ಯ ಕೂಡಾ ಆಕೆಗೆ ಸಾಥ್‌ ನೀಡಿದ್ದಾಳೆ ಎಂಬುದು ಪ್ರಾಥಮಿಕ ಮಾಹಿತಿ. ಅವರು ನಾಪತ್ತೆಯಾದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿತ್ತು.

ಮಡಿಕೇರಿಯಿಂದ ಮಂಗಳೂರಿಗೆ ಬಂದು ಅಲ್ಲಿಂದ ಮುಂದಿನ ದಾರಿ ಕಾಣದೆ ಮಲ್ಪೆ ತೀರಕ್ಕೆ ಬಂದಿದ್ದಾರೆ. ಅಲ್ಲಿ ಕುಳಿತಿದ್ದಾಗ ಕಡಲ ಅಲೆಗಳಿಗೆ ಸಿಲುಕಿದ್ದಾರೆ. ಒಂದು ಮಾಹಿತಿ ಪ್ರಕಾರ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿದೆ.

ಇವರಿಬ್ಬರೂ ಸುಮಾರು 12-14 ವರ್ಷದ ಪ್ರಾಯದ ಮಕ್ಕಳಾಗಿದ್ದು, ಯಾವ ಕಾರಣಕ್ಕಾಗಿ ಮನೆ ಬಿಟ್ಟು ಬಂದಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

Leave a Reply

You May Have Missed

error: Content is protected !!