ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರಗಳು; ಟ್ರಾಫಿಕ್‌ನಲ್ಲಿ ಸಿಲುಕಿದ ಜನ

ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರಗಳು; ಟ್ರಾಫಿಕ್‌ನಲ್ಲಿ ಸಿಲುಕಿದ ಜನ

ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಮೂರು ಮರಗಳು ಉರುಳಿ ಬಿದ್ದು ಸುಮಾರು ಎರಡು ತಾಸಿಗಿಂತ ಅಧಿಕ ಸಮಯ ವಾಹನಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಟ ನಡೆಸಿದ ಘಟನೆ ಶನಿವಾರ ನಡೆದಿದೆ.

ಶನಿವಾರ ಚಾರ್ಮಾಡಿ ಘಾಟಿ ಸೇರಿದಂತೆ ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ಮಧ್ಯಾಹ್ನದ ಬಳಿಕ ಮಳೆಯೊಂದಿಗೆ ಬೀಸಿದ ಗಾಳಿಗೆ ಘಾಟಿಯ ಎಂಟನೇ ತಿರುವಿನಲ್ಲಿ ಬೃಹತ್ ಗಾತ್ರದ ಮರ, ಸಮೀಪದ ಇನ್ನೆರಡು ಮರಗಳೊಂದಿಗೆ ರಸ್ತೆಗೆ ಉರುಳಿ ಬಿತ್ತು. ಎಂಟನೇ ತಿರುವಿನ ಮೇಲ್ಭಾಗದ ರಸ್ತೆಯಿಂದ ಏಕಕಾಲದಲ್ಲಿ ಈ ಮೂರು ಮರಗಳು ಕೆಳಭಾಗದ ರಸ್ತೆಗೆ ಉರುಳಿದವು. ಈ ವೇಳೆ ಮರಗಳು ಉರುಳಿದ ರಸ್ತೆ ಭಾಗದಲ್ಲಿ ಯಾವುದೇ ವಾಹನ ಸಂಚಾರ ಇರಲಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಈ ಸ್ಥಳದಲ್ಲಿ ಮರಗಳು ಹತ್ತಿರ ಹತ್ತಿರವಿದ್ದು ಒಂದು ಮರ ಉರುಳುವ ವೇಳೆ ಅದು ಸಮೀಪದ ಮರಗಳಿಗೆ ಬಡಿಯುವ ಕಾರಣ ಅವು ಉರುಳಿ ಬೀಳುತ್ತವೆ. ಮರಗಳು ಉರುಳಿದ ಕಾರಣ ಘಾಟಿ ಪ್ರದೇಶದಲ್ಲಿ ಸುಮಾರು 2 ಗಂಟೆಗಿಂತ ಅಧಿಕ ಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಘಾಟಿಯ ಇಕ್ಕೆಲಗಳಲ್ಲಿ ನಾಲ್ಕಾರು ಕಿಲೋಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶನಿವಾರವಾದ ಕಾರಣ ವಾಹನದಟ್ಟಣೆಯು ಅಧಿಕವಿತ್ತು. ವಿಪರೀತ ಮಳೆಯ ಸುರಿಯುತ್ತಿದ್ದು ವಾಹನ ಸವಾರರು, ಪ್ರವಾಸಿಗರು ಪರದಾಟ ನಡೆಸುವಂತಾಯಿತು.

ತಕ್ಷಣ ಧರ್ಮಸ್ಥಳ ಪೊಲೀಸರು, ಅರಣ್ಯ ಇಲಾಖೆ,ಚಾರ್ಮಾಡಿ ಹಸನಬ್ಬ ಮತ್ತು ತಂಡ, ಇಸ್ಮಾಯಿಲ್, ಮುಬಶೀರ್ ಪ್ರಜ್ವಲ್, ಕೆವಿ.ಗೌಡ ಹಾಗೂ ಸ್ಥಳೀಯರು ಸ್ಥಳಕ್ಕೆ ತೆರಳಿ ನಿರಂತರ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

Leave a Reply

You May Have Missed

error: Content is protected !!