ನೆಲ್ಯಾಡಿ-ಪುತ್ಯೆ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ.ಅನುದಾನ ಬಿಡುಗಡೆ

ನೆಲ್ಯಾಡಿ-ಪುತ್ಯೆ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ.ಅನುದಾನ ಬಿಡುಗಡೆ

ನೆಲ್ಯಾಡಿ: ಈ ಭಾಗದ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾದ ನೆಲ್ಯಾಡಿ ಪೇಟೆಯಿಂದ ಪುತ್ಯೆ ಮೂಲಕ ಕೊಕ್ಕಡ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 70 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು ಟೆಂಡರ್ ಸಹ ಆಗಿದೆ.
2023-24ನೇ ಸಾಲಿನ ರಾಜ್ಯ ಹೆದ್ದಾರಿ ನಿರ್ವಹಣೆ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಮಂಗಳೂರು ವಿಭಾಗಕ್ಕೆ 1.50 ಕೋಟಿ ರೂ.ಬಿಡುಗಡೆಗೊಂಡಿದ್ದು ಅದರಲ್ಲಿ ಪುತ್ತೂರು ಉಪವಿಭಾಗಕ್ಕೆ 70 ಲಕ್ಷ ರೂ.ಅನುದಾನ ಹಂಚಿಕೆ ಮಾಡಲಾಗಿದೆ. ಈ ಅನುದಾನವನ್ನು ನೆಲ್ಯಾಡಿ-ಪುತ್ಯೆ ರಸ್ತೆ ಅಭಿವೃದ್ಧಿಗೆ ಇಡಲಾಗಿದ್ದು ಟೆಂಡರ್ ಸಹ ಆಗಿದೆ. ನೆಲ್ಯಾಡಿಯಿಂದ ಪುತ್ಯೆ ತನಕ 1.15 ಕಿ.ಮೀ.ರಸ್ತೆ ಬಾಕಿ ಇದ್ದು ಇದರಲ್ಲಿ 70 ಲಕ್ಷದಲ್ಲಿ 3 ಮೀ.ಅಗಲದಲ್ಲಿ ಅಂದಾಜು 400 ಮೀ. ಉದ್ದಕ್ಕೆ ರಸ್ತೆ ಆಗಲಿದೆ. ಪಿಡಬ್ಲ್ಯುಡಿ ಗುತ್ತಿಗೆದಾರ ಬಪ್ಪಳಿಗೆಯ ಹರೀಶ್‌ಕುಮಾರ್ ಅವರಿಗೆ ಟೆಂಡರ್ ಆಗಿದ್ದು ಇನ್ನೆರಡು ದಿನದಲ್ಲಿ ಕಾಮಗಾರಿಯೂ ಆರಂಭಗೊಳ್ಳಲಿದೆ. ಆದರೂ ಇಲ್ಲಿ ಇನ್ನೂ ಅಂದಾಜು 700 ಮೀ.ರಸ್ತೆ ಬಾಕಿ ಆಗಲಿದೆ.

ಸದ್ರಿ ರಸ್ತೆಯು ಸುಳ್ಯ-ಪೈಚಾರು-ಸವಣೂರು-ಕುದ್ಮಾರು, ಆಲಂಕಾರು-ಮಾದೇರಿ-ಪಟ್ರಮೆ-ದಿಡುಪೆ-ಬೆಳ್ತಂಗಡಿ-ಧರ್ಮಸ್ಥಳ ರಾಜ್ಯ ಹೆದ್ದಾರಿಯಾಗಿದೆ. ಇದರಲ್ಲಿ ಬರುವ ಕಿ.ಮೀ.40.35 ರಿಂದ 41.50ವರೆಗಿನ ಅಂದರೆ ನೆಲ್ಯಾಡಿ ಜಂಕ್ಷನ್‌ನಿಂದ ಪುತ್ಯೆ ಸೇತುವೆ ತನಕದ 1.15 ಕಿ.ಮೀ.ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಇಲ್ಲಿ ಜಲ್ಲಿ ಕಲ್ಲುಗಳು ಎದ್ದುಹೋಗಿದ್ದು ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ತೀರಾ ಹದಗೆಟ್ಟ ಸದ್ರಿ ರಸ್ತೆಯಲ್ಲಿ ಬೈಕ್ ಸವಾರರು ಎದ್ದುಬಿದ್ದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚಾರವೇ ಕಷ್ಟ ಸಾಧ್ಯವಾಗಿತ್ತು. ರಸ್ತೆಯ ದುಸ್ಥಿತಿ ಬಗ್ಗೆ ಪತ್ರಿಕೆಯಲ್ಲೂ ವರದಿ ಪ್ರಕಟಗೊಂಡು ಜನಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು. ಸದ್ರಿ ರಸ್ತೆಯು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು ಮಾಜಿ ಸಚಿವರೂ ಆಗಿರುವ ಎಸ್.ಅಂಗಾರ ಅವರಿಗೂ ಮನವಿ ಮಾಡಲಾಗಿತ್ತು. ಸದ್ರಿ ರಸ್ತೆಯು ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು ಎರಡೂ ಪಂಚಾಯತ್‌ಗಳ ಗ್ರಾಮಸಭೆಗಳಲ್ಲೂ ಗ್ರಾಮಸ್ಥರ ಆಗ್ರಹದಂತೆ ರಸ್ತೆ ನಿರ್ಣಯ ಕೈಗೊಳ್ಳಲಾಗಿತ್ತು. ಸದ್ರಿ ರಸ್ತೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಬರುವ ಪುತ್ಯೆ ಸೇತುವೆಯಲ್ಲಿಂದ ಕೊಕ್ಕಡದ ತನಕ ನಾಲ್ಕು ವರ್ಷದ ಹಿಂದೆಯೇ ರಸ್ತೆ ಕಾಂಕ್ರಿಟೀಕರಣಗೊಂಡಿತ್ತು. ನೆಲ್ಯಾಡಿಯಿಂದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಮಾಯಿಲಕೋಟೆ ದೈವಸ್ಥಾನಕ್ಕೆ ಹೋಗುವ ಭಕ್ತರು ಇದೇ ರಸ್ತೆ ಬಳಕೆ ಮಾಡುತ್ತಿದ್ದರು. ಆದರೆ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದುದ್ದರಿಂದ ವಾಹನ ಸವಾರರು, ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಯೇ ಸಂಚರಿಸುತ್ತಿದ್ದರು.

ನೆಲ್ಯಾಡಿ-ಕೊಕ್ಕಡ ಸಂಪರ್ಕ ರಸ್ತೆಯ ನೆಲ್ಯಾಡಿ ಜಂಕ್ಷನ್‌ನಿಂದ ಪುತ್ಯೆ ಸೇತುವೆ ತನಕ ರಸ್ತೆ ತೀರಾ ಹದಗೆಟ್ಟುಹೋಗಿದೆ. ಸದ್ರಿ ರಸ್ತೆಯ ದುಸ್ಥಿತಿ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಯ ಪ್ರತಿ ಹಾಗೂ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾಮ ಪಂಚಾಯತ್ ಗ್ರಾಮಸಭೆಗಳಲ್ಲಿ ಕೈಗೊಂಡಿದ್ದ ನಿರ್ಣಯದ ಪ್ರತಿಯೊಂದಿಗೆ 1.15 ಕಿ.ಮೀ.ರಸ್ತೆ 1.80 ಕೋಟಿ ರೂ.ಅಂದಾಜು ಪಟ್ಟಿ ಸಿದ್ದಪಡಿಸಿ ಕಾಂಗ್ರೆಸ್ ಮುಖಂಡರಾದ ಜಿ.ಕೃಷ್ಣಪ್ಪ ಅವರ ಮೂಲಕ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಲಾಗಿತ್ತು. ಇದೀಗ 70 ಲಕ್ಷ ರೂ.ಅನುದಾನ ಮಂಜೂರುಗೊಂಡು ಟೆಂಡರ್ ಸಹ ಆಗಿದೆ. ಎರಡು ದಿನದೊಳಗೆ ಕಾಮಗಾರಿ ಪ್ರಾರಂಭಗೊಳ್ಳಲಿದೆ. 3ಮೀ.ಅಗಲಕ್ಕೆ ಅಂದಾಜು 400 ಮೀ.ರಸ್ತೆ ಅಭಿವೃದ್ಧಿಗೊಳ್ಳಲಿದೆ. ಉಳಿಕೆ ರಸ್ತೆಯ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ಪಿಡಬ್ಲ್ಯುಡಿ ಸಚಿವರಿಗೆ, ಇದಕ್ಕೆ ಶ್ರಮಿಸಿದ ಜಿ.ಕೃಷ್ಣಪ್ಪ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ಸರ್ವೋತ್ತಮ ಗೌಡ
ಮಾಜಿ ಸದಸ್ಯರು, ದ.ಕ.ಜಿ.ಪಂ.

ಲೋಕೋಪಯೋಗಿ ಇಲಾಖೆಯಿಂದ ಪುತ್ತೂರು ಉಪವಿಭಾಗಕ್ಕೆ 70 ಲಕ್ಷ ರೂ.ಅನುದಾನ ಮಂಜೂರುಗೊಂಡಿದ್ದು ಈ ಅನುದಾನದಲ್ಲಿ ನೆಲ್ಯಾಡಿ-ಪುತ್ಯೆ ರಸ್ತೆಯ ಕಾಮಗಾರಿ ನಡೆಯಲಿದೆ. ಗುತ್ತಿಗೆದಾರ ಬಪ್ಪಳಿಗೆಯ ಹರೀಶ್‌ಕುಮಾರ್ ಅವರಿಗೆ ಟೆಂಡರ್ ಆಗಿದೆ.
-ಸಿಕ್ವೇರಾ
ಇಂಜಿನಿಯರ್, ಲೋಕೋಪಯೋಗಿ ಇಲಾಖೆ

Leave a Reply

You May Have Missed

error: Content is protected !!