ಹೊಸ್ತೋಟ ಶಾಲೆಗೆ ಕ್ರೀಡಾ ಉಪಕರಣಗಳ ಹಸ್ತಾಂತರ

ಹೊಸ್ತೋಟ ಶಾಲೆಗೆ ಕ್ರೀಡಾ ಉಪಕರಣಗಳ ಹಸ್ತಾಂತರ

ಕೊಕ್ಕಡ: ಅರಸಿನಮಕ್ಕಿ ಸಮೀಪದ ಹೊಸ್ತೋಟದ ಪ್ರಾಥಮಿಕ ಶಾಲೆಗೆ ಅರಸಿನಮಕ್ಕಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಉನ್ನತ ಉದ್ಯೋಗದಲ್ಲಿರುವ ಮಿಥುನ್ ಕಾರಂತ್ ಅವರು ಸುಮಾರು 15 ಸಾವಿರ ರೂ. ವೆಚ್ಚದಲ್ಲಿ ಒದಗಿಸಿದ ಕ್ರೀಡಾ ಸಲಕರಣೆಗಳನ್ನು ಸೆ.6ರಂದು ಶಾಲೆಗೆ ಹಸ್ತಾಂತರಿಸಲಾಯಿತು.

ಮಿಥುನ್ ಕಾರಂತ್ ಅವರ ಹೆತ್ತವರಾದ ತಾ.ಪಂ.ಮಾಜಿ ಸದಸ್ಯ ಮಂಜುಳಾ ಕಾರಂತ್ – ರಾಜರಾಮ ಕಾರಂತ್ ದಂಪತಿ ಶಾಲೆಯ ಮುಖ್ಯ ಶಿಕ್ಷಕಿ ಮಾಲತಿಯವರಿಗೆ ಹಸ್ತಾಂತರಿಸಿ ಮಾತನಾಡಿದ ಮಂಜುಳಾ ಕಾರಂತ್ ಗ್ರಾಮೀಣ ಶಾಲೆಯಾದರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಬೆಳವಣಿಗೆಗೆ ಒತ್ತು ನೀಡಿರುವ ಹೊಸ್ತೋಟ ಶಾಲೆಗೆ ಕ್ರೀಡಾ ಸಾಮಗ್ರಿ ಒದಗಿಸಲು ಹರ್ಷವಾಗುತ್ತಿದೆ. ಮಕ್ಕಳು ಇದರ ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕಲಿತು ಶಾಲೆಗೆ ಕೀರ್ತಿ ತರಬೇಕೆಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುರಳೀಧರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಊರಿನ, ಶಾಲೆಯ ಬಗ್ಗೆ ಅಭಿಮಾನ ಹೊಂದಿ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಮಿಥುನ್ ಅವರು ಮಾದರಿಯಾಗಿದ್ದಾರೆ ಎಂದರು.

ಸಮಾರಂಭದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಕರ ಭಿಡೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ಸಂಘದ ಗಣೇಶ್ ಹೊಸ್ತೋಟ, ಎಸ್ಡಿಎಂಸಿ ಸದಸ್ಯರಾದ ಗಣೇಶ್ ಪಲಸ್ತಡ್ಕ, ನೀತಾ ರಾಧೇಶ್, ವೃಷಾಂಕ್ ಖಾಡಿಲ್ಕರ್, ಅಂಗನವಾಡಿ ಕಾರ್ಯಕರ್ತೆ ಭಾರತಿ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಮಾಲತಿಯವರು ಸ್ವಾಗತಿಸಿದರು. ಸಹಶಿಕ್ಷಕಿ ಜಯಂತಿ ವಂದಿಸಿದರು.

Leave a Reply

You May Have Missed

error: Content is protected !!