ಸುದೆಗಂಡಿ ರಸ್ತೆ ಕುಸಿತ: ಅಪಾಯ ಕಟ್ಟಿಟ್ಟ ಬುತ್ತಿ

Kokkada

ಸುದೆಗಂಡಿ ರಸ್ತೆ ಕುಸಿತ: ಅಪಾಯ ಕಟ್ಟಿಟ್ಟ ಬುತ್ತಿ

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ | ಸಂಚಾರಕ್ಕೆ ಕಾಡುತ್ತಿದೆ ಜೀವಭಯ

ಕೊಕ್ಕಡ: ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾದ ಅನಾಹುತಗಳ ಸಾಲಿಗೆ ಇದೀಗ ಕೊಕ್ಕಡ -ಅರಸಿನಮಕ್ಕಿ ರಸ್ತೆಯ ಸುದೆಗಂಡಿ ಭಾಗವೂ ಸೇರಿಕೊಂಡಿದೆ. ಸುದೆಗಂಡಿ ಯಲ್ಲಿ ರಸ್ತೆಯ ಬದಿಯಲ್ಲಿ ಭಾರಿ ಮಣ್ಣು ಕುಸಿತ ಉಂಟಾಗಿ ಅರ್ಧ ರಸ್ತೆ ಗೋಳಾಕಾರದಂತೆ ಬಾಯಿಟ್ಟಿದೆ. ಪ್ರತಿ ಕ್ಷಣವೂ ಈ ಭಾಗದಲ್ಲಿ ಸಂಚರಿಸುವವರಿಗೆ ಜೀವ ಭಯ ಕಾಡುತ್ತಿದೆ.

ಸುದೆಗಂಡಿ ಬಸ್ ನಿಲ್ದಾಣ ಸಮೀಪವೇ ಈ ಅಪಾಯಕಾರಿ ಭಾಗ ಕಂಡುಬರುತ್ತಿದ್ದು, ಈಗಾಗಲೇ ರಸ್ತೆ ಪಕ್ಕದ ಮಣ್ಣು ಕುಸಿತದಿಂದ ಅರ್ಧ ರಸ್ತೆ ಬಾಯಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭ ವಾಗಲಿದೆ. ಇಲ್ಲಿ ಕುಸಿತ ಸಂಭವಿಸಿ ರಸ್ತೆ ಸಂಪೂರ್ಣ ಕೊಚ್ಚಿಹೋಗುವ ಅಪಾಯದಲ್ಲಿ ಇದೆ.

ದಿನಕ್ಕೆ ನೂರಾರು ವಾಹನಗಳು ಸಂಚರಿ ಸುತ್ತವೆ. ಶಾಲಾ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು, ಮಹಿಳೆಯರು, ಗ್ರಾಮಸ್ಥರು ಈ ರಸ್ತೆಯಲ್ಲಿ ಭಯದೊಂದಿಗೆ ಪ್ರಯಾ ಣಿಸುವ ಅನಿವಾರ್ಯತೆ ನಡೆಸುತ್ತಿದ್ದಾರೆ.

ರಸ್ತೆಯ ಪಕ್ಕದಲ್ಲಿಯೇ ಕಪಿಲ ನದಿ ಹರಿಯುತ್ತಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಕಬ್ಬಿಣದ ತಡೆಗೋಡೆಗಳು ಈಗಾಗಲೇ ಹಾಳಾಗಿವೆ. ಇದನ್ನು ಸರಿ ಪಡಿಸದಿದ್ದರೆ, ಚಾಲನೆಯಲ್ಲಿ ಏನಾದರೂ ಅವಘಡಗಳು ಸಂಬಂಧಿಸಿದಲ್ಲಿ ವಾಹನಗಳು ನೇರ ನದಿಗೆ ಬೀಳುವ ಅಪಾಯವೂ ಇದೆ. ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ?:
ಈ ರಸ್ತೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು ಈ ರಸ್ತೆ ಮೂಲಕವೇ ಶಿಶಿಲದ ಪ್ರಸಿದ್ದ ಮತ್ತ್ವತೀರ್ಥ ಎಂದೇ ಪ್ರಸಿದ್ದಿ ಪಡೆದ ಶಿಶಿಲೇಶ್ವರ ದೇವಸ್ಥಾನ ಅಲ್ಲದೆ ಬೆಳ್ತಂಗಡಿ, ಪುತ್ತೂರು, ಕಡಬ ತಾಲೂಕು ಗಳಲ್ಲಿ ಬರುವ ಪ್ರದೇಶವನ್ನು ಸಂಪರ್ಕ ಸಾಧಿಸುವ ರಸ್ತೆ ಕೂಡ ಇದಾಗಿದೆ. ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿರುವುದು ಹೆಚ್ಚಿನ ಆತಂಕ ಹುಟ್ಟಿಸುತ್ತಿದೆ.

ಅಪಾಯಕಾರಿ ಮರಗಳ ಆತಂಕ:
ಸುದೆಗಂಡಿಯಿಂದ ಅರಸಿನಮಕ್ಕಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಬದುಕು ಕೊನೆಗಾಣಿಸುತ್ತಿರುವ ದೊಡ್ಡ ದೊಡ್ಡ ಹಸಿ ಹಾಗೂ ಒಣ ಮರಗಳು ರಸ್ತೆಗೆ ಬಾಗಿ ಕೊಂಡಿರುವ ಸ್ಥಿತಿಯಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿವೆ. ಇಂತಹ ಮರಗಳು ಮಳೆಯ ಕಾಲದಲ್ಲಿ ಯಾವುದೇ ಸಮಯದಲ್ಲಾದರೂ ಬೀಳುವಷ್ಟು ಅಪಾಯಕಾರಿಯಾಗಿ ನಿಂತಿವೆ. ಕಳೆದ ವರ್ಷವೂ ಇದೇ ರಸ್ತೆಯಲ್ಲಿ ಒಂದು ಮರ ಬಿದ್ದು, ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಈಗ ಮತ್ತಷ್ಟು ಮಾರಕ ಸ್ಥಿತಿಯಲ್ಲಿದೆ. ಈಗಲಾದರೂ ಕ್ರಮ ಕೈಗೊಳ್ಳಬೇಕು,” ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಪಿಡಿಒ ಸ್ಥಳ ಪರಿಶೀಲನೆ
ಕೌಕ್ರಾಡಿ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ದೇವಿಕಾ ಹಾಗೂ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳು ಅಳವಡಿಸಿ, ಪಂಚಾಯತ್‌ರಾಜ್ ಮತ್ತು ಲೋಕೋಪಯೋಗಿ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿ, ಸೂಕ್ತ ಅನುದಾನವನ್ನು ಬಿಡುಗಡೆ ಮಾಡಿ ರಸ್ತೆ ಸರಿ ಮಾಡಬೇಕು ಎಂದು ಒತ್ತಾ ಯಿಸಿದ್ದಾರೆ.

ರಸ್ತೆ ಉದ್ದಕ್ಕೂ ಇರುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸಬೇಕು ಮತ್ತು ರಸ್ತೆ ಕುಸಿದಿರುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಮಳೆ ಆರಂಭವಾಗುವುದಕ್ಕಿಂತ ಮೊದಲೇ ಕ್ರಮ ಕೈಗೊಳ್ಳಬೇಕು.
-ಜನಾರ್ದನ ಗೌಡ, ಸದಸ್ಯರು ಗ್ರಾ.ಪಂ. ಕೌಕ್ರಾಡಿ

ಸದ್ಯಕ್ಕೆ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ಆದರೆ ಈ ಕೆಲಸ ತಾತ್ಕಾಲಿಕ. ಅಪಾಯಕಾರಿ ಮರಗಳನ್ನು ಕತ್ತರಿಸಲು ಮತ್ತು ಕುಸಿದ ರಸ್ತೆಯನ್ನು ದುರಸ್ತಿ ಮಾಡಲು ಬೇಕಾದ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕಡಬದ ಪ್ರಕೃತಿ ವಿಕೋಪ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ.
-ದೇವಿಕಾ, ಪ್ರಭಾರ ಅಭಿವೃದ್ಧಿ ಅಧಿಕಾರಿ, ಕೌಕ್ರಾಡಿ

  •  
Previous post

Rain: ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜೂ.12ರಂದು ರಜೆ

Next post

ಕೊಕ್ಕಡ: ಅಪಾಯಕಾರಿ ಸ್ಥಳಗಳಲ್ಲಿ ಮನೆ ಹೊಂದಿರುವವರಿಗೆ ನೋಟಿಸ್ ನೀಡಿದ ಗ್ರಾಮ ಪಂಚಾಯತಿ: ಭಾರಿ ಮಳೆಯಾದರೆ ಸ್ಥಳಾಂತರಕ್ಕೆ ಸೂಚನೆ

Leave a Reply

You May Have Missed

error: Content is protected !!