ಏಲಡ್ಕದಲ್ಲಿ ಪೂರ್ಣ ಪ್ರಮಾಣದ ರೈಲು ಟರ್ಮಿನಲ್ ನಿಲ್ದಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ

ಸುಳ್ಯ

ಏಲಡ್ಕದಲ್ಲಿ ಪೂರ್ಣ ಪ್ರಮಾಣದ ರೈಲು ಟರ್ಮಿನಲ್ ನಿಲ್ದಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ

ಸುಳ್ಯ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿಯಾಗಿ, ಮಂಗಳೂರು-ಹಾಸನ ಮಾರ್ಗದ ಕಾಣಿಯೂರು ರೈಲು ನಿಲ್ದಾಣದ ಅಭಿವೃದ್ಧಿ ಹಾಗೂ ಸ್ಥಳಾಂತರದ ಕುರಿತು ಮಹತ್ವದ ಮನವಿ ಸಲ್ಲಿಸಿದರು.

ಮಂಗಳೂರು-ಹಾಸನ ರೈಲು ಮಾರ್ಗದಲ್ಲಿರುವ ಕಾಣಿಯೂರು ನಿಲ್ದಾಣವು ಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಹತ್ತಿರದಲ್ಲಿದ್ದು, ಪ್ರಯಾಣಿಕರ ಬಳಕೆಯಲ್ಲಿದೆ. ಆದರೆ, ನಿಲ್ದಾಣದ ಮೂಲಭೂತ ಸೌಕರ್ಯಗಳು ಅತಿ ಕಡಿಮೆ ಇರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು, ಕಾಣಿಯೂರು ನಿಲ್ದಾಣವನ್ನು ಏಲಡ್ಕ ಪ್ರದೇಶಕ್ಕೆ ಸ್ಥಳಾಂತರಿಸಿ ಅಲ್ಲಿ ಪೂರ್ಣ ಪ್ರಮಾಣದ ಟರ್ಮಿನಲ್ ನಿಲ್ದಾಣವನ್ನು ಅಭಿವೃದ್ಧಿಪಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ಅವರು ಮುಂದುವರೆದು — “ಏಲಡ್ಕದಲ್ಲಿ ಹೊಸ ಟರ್ಮಿನಲ್ ನಿಲ್ದಾಣ ನಿರ್ಮಾಣವಾದರೆ ಅಲ್ಲಿ ಹಲವು ಪ್ಲಾಟ್‌ಫಾರ್ಮ್‌ಗಳು, ಪಿಟ್ ಲೈನ್‌ಗಳು, ಸ್ಟೇಬಲ್ ಲೈನ್‌ಗಳು ಹಾಗೂ ಕೋಚಿಂಗ್ ಡಿಪೋ ಸ್ಥಾಪಿಸಲು ಸಾಧ್ಯವಾಗುತ್ತದೆ. ಇದರಿಂದ ನೈರುತ್ಯ ರೈಲ್ವೆಗೆ ಈ ಪ್ರದೇಶದಿಂದ ದೂರದ ರೈಲುಗಳನ್ನು ಪ್ರಾರಂಭಿಸಲು ಹಾಗೂ ನಿರ್ವಹಿಸಲು ಅನುಕೂಲವಾಗುತ್ತದೆ. ಜೊತೆಗೆ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್‌ನಲ್ಲಿ ಉಂಟಾಗುವ ದಟ್ಟಣೆಯೂ ಕಡಿಮೆಯಾಗಲಿದೆ. ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್ ಹಾಗೂ ಮಂಗಳೂರು ನಿಲ್ದಾಣಗಳಿಗೆ ಸ್ಯಾಟ್ ಲೈಟ್ ಟರ್ಮಿನಲ್ ಆಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ” ಎಂದು ತಿಳಿಸಿದರು.

ಈ ಕುರಿತು ರೈಲ್ವೆ ಸಚಿವ ವಿ.ಸೋಮಣ್ಣ ಅವರು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಕಾಣಿಯೂರು ಸಹಕಾರ ಸಂಘದ ಅಧ್ಯಕ್ಷರು, ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಉದನಡ್ಕ ಹಾಗೂ ರೈಲ್ವೆ ಬಳಕೆದಾರರ ಸಂಘದ ಸದಸ್ಯ ಶಂಕರನಾರಾಯಣ ಭಟ್ ಕುಂಞ್ಞಹಿತ್ಲು ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!