ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ ಎಂ. ಡಿ.31ರಂದು ಸೇವಾ ನಿವೃತ್ತಿ


ನೆಲ್ಯಾಡಿ: ಕಳೆದ 27 ವರ್ಷಗಳಿಂದ ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ನಿಷ್ಠೆ, ಶಿಸ್ತು ಹಾಗೂ ಸೇವಾಭಾವದಿಂದ ಕಾರ್ಯನಿರ್ವಹಿಸುತ್ತಿರುವ ಲೀಲಾವತಿ ಎಂ. ಅವರು ಡಿ.31ರಂದು ಸರ್ಕಾರಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.
ಲೀಲಾವತಿ ಎಂ. ಅವರು ಜುಲೈ 28, 1994ರಂದು ಬಜತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದರು. ಅಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ 1998ರಲ್ಲಿ ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು, ಇಲ್ಲಿ ಸುಮಾರು 27 ವರ್ಷ 5 ತಿಂಗಳುಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟಾರೆ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಅವರು 31 ವರ್ಷ 5 ತಿಂಗಳು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಮಾತ್ರವಲ್ಲದೆ, ಬಜತ್ತೂರು ಹಾಗೂ ಪಡುಬೆಟ್ಟು ಶಾಲೆಗಳಲ್ಲಿ ಗಣಿತ ಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ದೈಹಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಏನೆಕಲ್ಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಲೀಲಾವತಿ ಅವರು, ಸುಬ್ರಹ್ಮಣ್ಯೇಶ್ವರ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಮುಗಿಸಿ, ಮೂಡಬಿದ್ರೆಯ ಅನಂತರಾಜ ಕಾಲೇಜಿನಲ್ಲಿ ಸಿ.ಪಿ.ಎಡ್. ಪದವಿಯನ್ನು ಪಡೆದಿದ್ದಾರೆ.
ಕಾಲೇಜು ವ್ಯಾಸಂಗದ ಅವಧಿಯಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿಯಾಗಿದ್ದ ಲೀಲಾವತಿ ಎಂ. ಅವರು ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಸರಕಾರಿ ನೌಕರರ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ವಾಲಿಬಾಲ್ ಹಾಗೂ ಖೋ-ಖೋ ಪಂದ್ಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಕ್ರೀಡಾ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.
ಪ್ರಸ್ತುತ ಕಡಬ ಗ್ರಾಮದ ಆರಿಗದಲ್ಲಿ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ವಾಸ್ತವ್ಯವಿರುವ ಲೀಲಾವತಿ ಎಂ. ಅವರ ನಿವೃತ್ತಿ ಸಂದರ್ಭದಲ್ಲಿ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಅವರ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸುತ್ತಿದ್ದಾರೆ.





















Leave a Reply