ರಸ್ತೆಗೆ ಉರುಳಿದ ಬೃಹತ್ ಮರ: ಒಂದೂವರೆ ಗಂಟೆಗೂ ಅಧಿಕ ಸಂಚಾರ ಸ್ಥಗಿತ

ರಸ್ತೆಗೆ ಉರುಳಿದ ಬೃಹತ್ ಮರ: ಒಂದೂವರೆ ಗಂಟೆಗೂ ಅಧಿಕ ಸಂಚಾರ ಸ್ಥಗಿತ

ರಸ್ತೆಗೆ ಉರುಳಿದ ಬೃಹತ್ ಮರ: ಒಂದೂವರೆ ಗಂಟೆಗೂ ಅಧಿಕ ಸಂಚಾರ ಸ್ಥಗಿತ

 

ರಸ್ತೆಗೆ ಉರುಳಿದ ಬೃಹತ್ ಮರ: ಒಂದೂವರೆ ಗಂಟೆಗೂ ಅಧಿಕ ಸಂಚಾರ ಸ್ಥಗಿತ

ನೆಲ್ಯಾಡಿ: ಧರ್ಮಸ್ಥಳ–ಸುಬ್ರಹ್ಮಣ್ಯ ಸಂಪರ್ಕಿಸುವ ಕೌಕ್ರಾಡಿ ಗ್ರಾಮದ ದಡ್ಡಲಪಳಿಕೆ ಎಂಬಲ್ಲಿ ಶನಿವಾರ ಸುರಿದ ಭಾರೀ ಗಾಳಿ-ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ನಡೆದಿದೆ.

ಮರ ರಸ್ತೆಯ ಮಧ್ಯಭಾಗಕ್ಕೆ ಉರುಳಿಬಿದ್ದಿದ್ದರಿಂದ ರಸ್ತೆಯ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಕಡೆಗೆ ಸಂಚರಿಸುತ್ತಿದ್ದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು. ಕೆಲವು ವಾಹನಗಳು ಕೊಕ್ಕಡ–ಪುತ್ಯೆ ಮಾರ್ಗದ ಮೂಲಕ ಪರ್ಯಾಯವಾಗಿ ಸಂಚರಿಸಿದವು.

ಈ ಭಾಗದಲ್ಲಿ ರಸ್ತೆಯ ಪಕ್ಕದಲ್ಲಿರುವ ಹಲವು ಬೃಹತ್ ಮರಗಳು ಅಪಾಯಕಾರಿಯಾಗಿ ರಸ್ತೆಯತ್ತ ವಾಲಿಕೊಂಡಿದ್ದು, ಮಳೆಗಾಲದಲ್ಲಿ ಅವು ಉರುಳಿ ಬೀಳುವ ಭೀತಿ ಇದೆ ಎಂದು ಸಾರ್ವಜನಿಕರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ನಿರ್ಲಕ್ಷ್ಯದ ಪರಿಣಾಮವಾಗಿ ಪ್ರತಿ ಮಳೆಗಾಲದಲ್ಲೂ ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ಅಡ್ಡಿಯಾಗುವುದು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ಗುರುತಿಸಿ ತೆರವುಗೊಳಿಸುವಂತೆ ಸ್ಥಳೀಯರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಪ ವಲಯಧಿಕಾರಿ ವಿನಯ್, ನೆಲ್ಯಾಡಿ ಹೊರಠಾಣೆ ಪೊಲೀಸರು ಹಾಗೂ ಸ್ಥಳೀಯ ಸಾರ್ವಜನಿಕರು ಆಗಮಿಸಿ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಸುಮಾರು ಒಂದೂವರೆ ಗಂಟೆಗಳ ಕಾರ್ಯಾಚರಣೆಯ ಬಳಿಕ ರಸ್ತೆಯನ್ನು ಸಂಚಾರಯೋಗ್ಯಗೊಳಿಸಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಯಿತು. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

 

Leave a Reply

You May Have Missed

error: Content is protected !!