ಶಿರಾಡಿ: ಮೂರು ದಿನದ ಹಿಂದೆ ಪಲ್ಟಿಯಾಗಿದ್ದ ಲಾರಿ ಚಾಲಕನ ಶವ ಪತ್ತೆ

Shiradi

ಶಿರಾಡಿ: ಮೂರು ದಿನದ ಹಿಂದೆ ಪಲ್ಟಿಯಾಗಿದ್ದ ಲಾರಿ ಚಾಲಕನ ಶವ ಪತ್ತೆ

ನೆಲ್ಯಾಡಿ: ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಹಳ್ಳದಲ್ಲಿ ಪತ್ತೆಯಾಗಿದ್ದ ಅಪರಿಚಿತ ಗಂಡಸಿನ ಮೃತದೇಹದ ಗುರುತು ಪತ್ತೆಯಾಗಿದ್ದು, ಜೂ.24ರಂದು ರಾತ್ರಿ ಕೊಡ್ಯಕಲ್ಲು ಬಳಿ ಪಲ್ಟಿಯಾಗಿದ್ದ ಲಾರಿಯ ಚಾಲಕನ ಶವ ಎಂದು ಗುರುತಿಸಲಾಗಿದೆ.

ಮೃತ ಲಾರಿ ಚಾಲಕ ಬೆಂಗಳೂರು ನೆಲಮಂಗಲ ನಿವಾಸಿ ಪ್ರೇಮ್‌ಕುಮಾರ್(45ವ.)ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಜೂ.24ರಂದು ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು.

ಘಟನೆಯಲ್ಲಿ ಲಾರಿ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಪತ್ತೆಯಾಗಿರಲಿಲ್ಲ. ಈ ಮಧ್ಯೆ ಜೂ.26ರಂದು ಸಂಜೆ ಅಪಘಾತ ನಡೆದ ಸ್ಥಳದಿಂದ ಸುಮಾರು 200 ಮೀ.ದೂರದಲ್ಲಿ ಹಳ್ಳದಲ್ಲಿ ಅಪರಿಚಿತ ಗಂಡಸಿನ ಮೃತದೇಹ ಕವುಚಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಬಲಬದಿ ಹಣೆಯಲ್ಲಿ ರಕ್ತ ಗಾಯ ಹಾಗೂ ಮೂಗಿನಲ್ಲಿ ರಕ್ತವು ಸೋರುತ್ತಿರುವುದು ಈ ವೇಳೆ ಕಂಡುಬಂದಿತ್ತು. ಈ ಮೃತದೇಹವನ್ನು ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ನಾಪತ್ತೆಯಾಗಿದ್ದ ಲಾರಿ ಚಾಲಕ ಪ್ರೇಮ್‌ಕುಮಾರ್‌ನ ಕುಟುಂಬಸ್ಥರು ಜೂ.27ರಂದು ಆಸ್ಪತ್ರೆಗೆ ಆಗಮಿಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದು, ಮೃತದೇಹವು ಲಾರಿ ಚಾಲಕ ಪ್ರೇಮ್‌ಕುಮಾರ್‌ರವರದ್ದು ಎಂದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.

  •  

Leave a Reply

You May Have Missed

error: Content is protected !!