ಜಾನುವಾರು ಸಾಗಿಸುತ್ತಿದ್ದ ವಾಹನ ತಡೆದ ಪೊಲೀಸರ ಮೇಲೆ ಡಿಕ್ಕಿ — ಕೊಲೆಯತ್ನ ಮಾಡಿದ ಆರೋಪಿಗೆ ಪೊಲೀಸರ ಗುಂಡು!
ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ – ಆರೋಪಿಗೆ ಕಾಲಿಗೆ ಗುಂಡು, ಇನ್ನೊಬ್ಬ ಆರೋಪಿಯ ಪರಾರಿ



ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಳ ಪ್ರದೇಶದಲ್ಲಿ ಇಂದು(ಅ.22) ಮುಂಜಾನೆ ನಡೆದ ಘಟನೆ ಪೊಲೀಸ್ ಇಲಾಖೆಯನ್ನು ಆತಂಕಕ್ಕೀಡಾಗಿಸಿದೆ. ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಗಾಡಿಯನ್ನು ತಡೆದ ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದು ಕೊಲೆಯತ್ನ ಮಾಡಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಕೇರಳದ ಕಾಸರಗೋಡು ಮೂಲದ ಅಬ್ದುಲ್ಲ(40 ವರ್ಷ) ಎನ್ನುವ ವ್ಯಕ್ತಿ, ಐಚರ್ ವಾಹನದಲ್ಲಿ ಸುಮಾರು 10 ಜಾನುವಾರುಗಳನ್ನು ಸಾಗಿಸುತ್ತಿದ್ದನು. ಆತನೇ ವಾಹನದ ಚಾಲಕನಾಗಿದ್ದು, ಇನ್ನೊಬ್ಬ ಸಹಆರೋಪಿಯು ಸಹ ಜೊತೆಗಿದ್ದನೆಂದು ತಿಳಿದುಬಂದಿದೆ.
ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಆರೋಪಿಯು ಅದನ್ನು ಲೆಕ್ಕಿಸದೆ, ವೇಗವಾಗಿ ಓಡಿಸಿಕೊಂಡು ಹೋಗಿದ್ದನು. ಸುಮಾರು 10 ಕಿಲೋಮೀಟರ್ ದೂರದವರೆಗೆ ಪೊಲೀಸರು ಬೆನ್ನಟ್ಟಿದ ನಂತರ, ಆರೋಪಿಯು ಪೊಲೀಸ್ ಜೀಪಿಗೆ ಹಿಂಬದಿಯಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಪೊಲೀಸರ ಜೀವಕ್ಕೆ ಅಪಾಯ ಉಂಟಾದ ಹಿನ್ನೆಲೆ, ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ಅವರು ಎರಡು ಸುತ್ತು ಗುಂಡು ಹಾರಿಸಿದ್ದು, ಒಂದೊಂದು ಗುಂಡು ಐಚರ್ ವಾಹನದ ಭಾಗಕ್ಕೆ ತಗುಲಿದ್ದು, ಮತ್ತೊಂದು ಗುಂಡು ಆರೋಪಿಯ ಕಾಲಿಗೆ ಬಿದ್ದಿದೆ.
ಗುಂಡೇಟಿನಿಂದ ಗಾಯಗೊಂಡ ಅಬ್ದುಲ್ಲನನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಮಯದಲ್ಲಿ ವಾಹನದಲ್ಲಿದ್ದ ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ತಿಳಿಸಿದಂತೆ, ಅಬ್ದುಲ್ಲ ವಿರುದ್ಧ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 33/2025 ಗೋ ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈಗಲೂ ಈತನ ವಿರುದ್ಧ ಕೊಲೆಯತ್ನ, ಅನಧಿಕೃತ ಜಾನುವಾರು ಸಾಗಣೆ ಹಾಗೂ ಸರ್ಕಾರದ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪಗಳಡಿ ಹೊಸ ಪ್ರಕರಣ ದಾಖಲಿಸಲಾಗುತ್ತಿದೆ.
ಘಟನೆಯ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





















Leave a Reply