ಅಡ್ಡಹೊಳೆ: ಕಾರು ಅಪಘಾತ – ಹೊಳೆನರಸೀಪುರ ಯುವಕ ಸ್ಥಳದಲ್ಲೇ ಸಾವು

Nellyadi

ಅಡ್ಡಹೊಳೆ: ಕಾರು ಅಪಘಾತ – ಹೊಳೆನರಸೀಪುರ ಯುವಕ ಸ್ಥಳದಲ್ಲೇ ಸಾವು

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಂಡ್ಯ ಸಮೀಪದ ಅಡ್ಡಹೊಳೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಅ.22 ಮುಂಜಾನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರದ ಯುವಕ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತನನ್ನು ಹಾಸನ ತಾಲ್ಲೂಕಿನ ಹೊಳೆನರಸೀಪುರದ ಸಂಜಯ್ (25) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಕಾರು ಚಾಲಕರಾಗಿದ್ದ ಸಂಜಯ್, ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ತೋಟದಲ್ಲಿ ಬೆಳೆದ ಹೂಗಳನ್ನು ಮಾರಾಟ ಮಾಡಲು ಉಡುಪಿ ಕಡೆಗೆ ಬಂದಿದ್ದರು. ಹೂವಿನ ಮಾರಾಟ ಮುಗಿಸಿ ಉಡುಪಿಯಿಂದ ಸ್ವಗ್ರಾಮದತ್ತ ಕಾರಿನಲ್ಲಿ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಗುಂಡ್ಯ ಸಮೀಪದ ಅಡ್ಡಹೊಳೆಯ ಬಳಿ ಕಾರು ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪದಲ್ಲಿರುವ ಹೆದ್ದಾರಿ ತಡೆಗೋಡೆಗೆ ಬಲವಾಗಿ ಡಿಕ್ಕಿಯಾಗಿದೆ. ಕಾರಿನ ಎಡಭಾಗದಲ್ಲಿ ಕುಳಿತಿದ್ದ ಸಂಜಯ್ ಅವರ ತಲೆಯ ಭಾಗ ತಡೆಗೋಡೆಗೆ ಬಲವಾಗಿ ಅಪ್ಪಳಿಸಿದ್ದರಿಂದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿ ಚಾಲಕ ಸೇರಿ ಒಟ್ಟು ನಾಲ್ವರು ಇದ್ದರು. ಇವರನ್ನು ಅರಕಲಗೂಡಿನ ಚಾಲಕ ಸಂದೀಪ್ ಹಾಗೂ ಶೇಷ, ಮಹೇಶ್ ಎಂದು ಗುರುತಿಸಲಾಗಿದೆ. ಉಳಿದ ಮೂವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

  •  

Leave a Reply

You May Have Missed

error: Content is protected !!