ನೆಲ್ಯಾಡಿ-ಪಡುಬೆಟ್ಟು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ


ನೆಲ್ಯಾಡಿ: ನೆಲ್ಯಾಡಿ-ಪಡುಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮೀಣ ವಿದ್ಯಾರ್ಥಿಗಳು ಕೇವಲ ಪಾಠ ಪುಸ್ತಕಗಳೊಳಗೆ ಸೀಮಿತರಾಗದೇ, ತಮ್ಮೊಳಗಿನ ನೈಪುಣ್ಯ ಮತ್ತು ಪ್ರತಿಭೆಯನ್ನು ಬೇರೆ ಬೇರೆ ವೇದಿಕೆಗಳಲ್ಲಿ ತೋರಿಸುವಂತಹ ಅವಕಾಶಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಪ್ರತಿಭಾ ಕಾರಂಜಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವೊಂದಿಗೆ, ಭವಿಷ್ಯದ ನಾಯಕರಾಗಿ ಬೆಳೆಸುವ ವೇದಿಕೆ ಎಂದು ಹೇಳಿದರು. ಶಾಲೆಯ ಶಿಕ್ಷಕರ ಶ್ರಮ ಮತ್ತು ಪೋಷಕರ ಸಹಕಾರವನ್ನು ಅವರು ಶ್ಲಾಘಿಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಶಾಂತಿಮಾರ್ ಅವರು ಅಧ್ಯಕ್ಷತೆ ವಹಿಸಿ ಶಾಲೆಯ ಅಭಿವೃದ್ಧಿಗೆ ಸಮುದಾಯದ ಸಂಪೂರ್ಣ ಸಹಕಾರ ಅಗತ್ಯ. ಮಕ್ಕಳಿಗಾಗಿ ಶಾಲೆ ಮಾಡುತ್ತಿರುವ ಉತ್ತಮ ಕಾರ್ಯಗಳನ್ನು ಮುಂದುವರಿಸಲು ಎಸ್.ಡಿ.ಎಂ.ಸಿ ಸದಾ ಬದ್ಧವಾಗಿದೆ ಎಂದು ಹೇಳಿದರು.
ನೆಲ್ಯಾಡಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ ಅವರು ಮಾತನಾಡಿ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಹೊರತೆಗೆದು ತರಗತಿಯಿಂದ ಹೊರಗೂ ಕಲಿಕೆಯ ವಿಸ್ತಾರವನ್ನು ನೀಡುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಸಮಗ್ರ ಬೆಳವಣಿಗೆಗೆ ಅತ್ಯಂತ ಅಗತ್ಯ ಎಂದು ಹೇಳಿದರು.
ವೇದಿಕೆಯಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ, ಪುಷ್ಪಾ, ಜಯಲಕ್ಷ್ಮಿ, ಪಡುಬೆಟ್ಟು ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಫೀಕ್ ಉಳಿತೊಟ್ಟು ಉಪಸ್ಥಿತರಿದ್ದರು.
ಶಾಲೆಯ ಮುಖ್ಯಶಿಕ್ಷಕಿ ಜೆಸ್ಸಿ ಕೆ.ಎ. ಸ್ವಾಗತಿಸಿದರು, ಸಹಶಿಕ್ಷಕಿ ಕಮಾಲಾಕ್ಷಿ ಕೆ. ಕಾರ್ಯಕ್ರಮ ನಿರೂಪಿಸಿದರು, ದೈಹಿಕ ಶಿಕ್ಷಣಶಿಕ್ಷಕಿ ಲೀಲಾವತಿ ಎಂ. ವಂದಿಸಿದರು.
ಕಾರ್ಯಕ್ರಮ ಯಶಸ್ವಿಗೆ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕಾರ ನೀಡಿದರು.





















Leave a Reply