1 ನೇ ಕ್ಲಾಸ್ ಮಗುವಿಗೆ 12 ಕೆಜಿ ತೂಕದ ಸ್ಕೂಲ್ ಬ್ಯಾಗ್! ಭಾರ ತಾಳಲಾರದೆ ಬಿದ್ದ ಬಾಲಕಿಗೆ ಏಟು

1 ನೇ ಕ್ಲಾಸ್ ಮಗುವಿಗೆ 12 ಕೆಜಿ ತೂಕದ ಸ್ಕೂಲ್ ಬ್ಯಾಗ್! ಭಾರ ತಾಳಲಾರದೆ ಬಿದ್ದ ಬಾಲಕಿಗೆ ಏಟು

ಬಂಟ್ವಾಳ: ಶಾಲಾ ಮಕ್ಕಳ ಬ್ಯಾಗ್ ಹೊರೆ ಬಗ್ಗೆ ಎಷ್ಟೇ ಧ್ವನಿಯೆತ್ತಿದರೂ, ಸರಕಾರ ನಿಯಮ ತಂದರೂ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿದೆಯೇ ಹೊರತು ಸುಧಾರಿಸುತ್ತಿಲ್ಲ. ಇದರ ಒಟ್ಟಾರೆ ಪರಿಣಾಮ ಮಕ್ಕಳ ಮೇಲಾಗುತ್ತಿರುವುದು ನಿಜ. ಇದೀಗ ಶಾಲಾ ಬ್ಯಾಗ್ ಭಾರ ತಾಳಲಾರದೆ 1ನೇ ತರಗತಿ ಬಾಲಕಿಯೊಬ್ಬಳು ಕುಸಿದು ಬಿದ್ದು ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿ ನಡೆದಿದೆ.

1ನೇ ತರಗತಿ ಮಗುವಿಗೆ ಎಷ್ಟು ಅಗತ್ಯವೋ ಅಷ್ಟು ಪುಸ್ತಕಗಳು ಮತ್ತು ಸಾಮಗ್ರಿಗಳು ಚೀಲದೊಳಗಿದ್ದಿದ್ದರೆ ಬಾಲಕಿ ಬೀಳುವ ಪ್ರಶ್ನೆ ಇರುತ್ತಿರಲಿಲ್ಲ. ಅದರೆ ಆಕೆಯ ಬೆನ್ನಲ್ಲಿದ್ದ ಚೀಲದಲ್ಲಿ 19 ಪುಸ್ತಕಗಳಿದ್ದು ಒಟ್ಟು 12 ಕೆಜಿ ತೂಗುತ್ತಿತ್ತು! ಸ್ಥಳೀಯ ಖಾಸಗಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಆಕೆ ಇಂಟರ್ ಲಾಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿದ್ದು ಆಕೆಯ ಮೂಗಿಗೆ ಗಾಯವಾಗಿದೆ. ಈ ದೃಶ್ಯದ ಸಿಸಿ ಟಿವಿ ಫೂಟೇಜ್ ಸಿಕ್ಕಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.

ಈ ದೃಶ್ಯವನ್ನು ಗಮನಿಸಿದಾಗ ಆಕೆ ಮಳೆ ಬರುತ್ತಿದ್ದ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆ ಕಾಲುಜಾರಿ ಬಿದ್ದ ಹಾಗೆ ಕಾಣಿಸುತ್ತಿದೆ. ಆದರೆ ಏನೇ ಆಗಿದ್ದರೂ ಆಕೆ ಭಾರವಾದ ಬ್ಯಾಗ್ ಅನ್ನು ಹೊತ್ತುಕೊಂಡು ನಡೆಯಲು ಕಷ್ಟಪಡುತ್ತಿದ್ದುದಂತೂ ನಿಜ. ಸ್ಥಳದಲ್ಲಿದ್ದವರು ಬ್ಯಾಗ್ ಅನ್ನು ಪರಿಶೀಲಿಸಿದಾಗ ಬ್ಯಾಗ್ ಬಹಳ ಭಾರವಾಗಿದ್ದುದು ಗಮನಕ್ಕೆ ಬಂದಿದೆ.

ಸಾರ್ವಜನಿಕರಿಂದ ತೀವ್ರ ಆಕ್ರೋಶ
ಈ ಬಗ್ಗೆ ಸಾರ್ವಜನಿಕ ವಲಯ ಮತ್ತು ನೆಟ್ಟಿಗರು ಈ ಘಟನೆಯನ್ನು ತೀವ್ರವಾಗಿ ವಿರೋಧಿಸಿದ್ದು, ಖಾಸಗಿ ಶಾಲೆಗಳು ಮಕ್ಕಳ ಆರೋಗ್ಯದ ಜೊತೆ ಆಟವಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಆದೇಶದ ಹೊರತಾಗಿಯೂ ಮಕ್ಕಳ ಮೇಲೆ ಇಷ್ಟೊಂದು ಭಾರ ಹೊರಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ತಲೆಮಾರಿನ ಮಕ್ಕಳ ದೈಹಿಕ ಕ್ಷಮತೆ ಬಹಳ ಭಿನ್ನವಾಗಿವೆ. ಸಾಮಾನ್ಯವಾಗಿ ಇಂದಿನ ಕಾಲದ ಹೆಚ್ಚಿನ ಮಕ್ಕಳು ಬಹಳ ಸೂಕ್ಷ್ಮವಾಗಿರುತ್ತಾರೆ. ಒಂದು ವೇಳೆ ಅವರು ದೊಡ್ಡ ದೊಡ್ಡ ಬ್ಯಾಗುಗಳನ್ನು ಶಾಲೆಗೆ ತೆರಳಿದರೆ ಖಂಡಿತವಾಗಿಯೂ ಬೆನ್ನುನೋವು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂತಹ ಶಾಲೆಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

ಒಂದು ಮಗು ಎಷ್ಟು ಭಾರ ಹೊರಬಹುದು?
ಶಿಕ್ಷಣ ಇಲಾಖೆ ಶಾಲಾ ಬ್ಯಾಗ್‌ ಹೊರೆ ತಗ್ಗಿಸಲು ಕ್ರಮ ವಹಿಸುವಂತೆ ಸುತ್ತೋಲೆ ಹೊರಡಿಸಿದ್ದು, ಹಳೇ ವರದಿ ಪ್ರಕಾರವೇ ಬ್ಯಾಗ್‌ ತೂಕ ನಿಗದಿ ಮಾಡಬೇಕೆಂದು ಶಾಲೆಗಳಿಗೆ ಸೂಚನೆ ನೀಡಿತ್ತು. ಆ ಪ್ರಕಾರ 1 ರಿಂದ 10ನೇ ತರಗತಿಯವರೆಗೆ ಶಾಲಾ ಬ್ಯಾಗ್‌ ತೂಕ ಇಷ್ಟೇ . 1ರಿಂದ 2ನೇ ತರಗತಿಗೆ 1.5 ರಿಂದ 2 ಕೆ.ಜಿ, 3 ರಿಂದ 5 ನೇ ತರಗತಿಗೆ 2 ರಿಂದ 3 ಕೆ.ಜಿ, 6 ರಿಂದ 8 ನೇ ತರಗತಿಗೆ 3 ರಿಂದ 4 ಕೆ.ಜಿ, 9ರಿಂದ 10ನೇ ತರಗತಿಗೆ 4 ರಿಂದ 5 ಕೆ.ಜಿ.ನಿಗದಿ ಮಾಡಿದೆ. 1 ಮತ್ತು 2ನೇ ತರಗತಿ ಶಿಕ್ಷಣವು ಬೋಧನೆಯ ಬುನಾದಿ ಹಂತವಾಗಿರುವುದರಿಂದ ಮಕ್ಕಳಿಗೆ ಶಾಲೆಗಳಲ್ಲಿಯೇ ಚಟುವಟಿಕೆ ಮೂಲಕ ಕಲಿಯಲು ಆದ್ಯತೆ ನೀಡಬೇಕು. ಅವರಿಗೆ ಹೋಮ್‌ ವರ್ಕ್ ಎಂದು ನೀಡಿ ಸುಮ್ಮನೇ ಒತ್ತಡ ಹೇರಬಾರದು ಎಂದೂ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿತ್ತು.

Leave a Reply

You May Have Missed

error: Content is protected !!