ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ!

ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ!

ನೇಸರ ಜ28:ರಾಜ್ಯದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ (30) ಅವರು ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ಇಂದು ಬೆಳಗ್ಗೆ ಸುಮಾರು 10 ಗಂಟೆ ಸುಮಾರಿಗೆ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಸೌಂದರ್ಯ ಅವರು ಬಿಎಸ್‌ ಯಡಿಯೂರಪ್ಪ ಅವರ ಎರಡನೇ ಪುತ್ರಿ ಪದ್ಮಾವತಿ ಅವರ ಮಗಳಾಗಿದ್ದಾರೆ. ಘಟನೆ ಸಂಬಂಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತ ಸೌಂದರ್ಯ ಅವರು ಬೆಂಗಳೂರಿನ ವಸಂತ ನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಸೌಂದರ್ಯಗೆ 2018ರಲ್ಲಿ ವೈದ್ಯ ಡಾ. ನೀರಜ್‌ ಅವರ ಜೊತೆ ವಿವಾಹವಾಗಿತ್ತು. ಮೇಲ್ನೋಟಕ್ಕೆ ಕೌಟುಂಬಿಕ ಸಮಸ್ಯೆ ಇರಬಹುದೆಂದು ಅಂದಾಜಿಸಲಾಗಿದ್ದು, ಸೌಂದರ್ಯ ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಸೌಂದರ್ಯಗೆ ಒಂಭತ್ತು ತಿಂಗಳ ಒಂದು ಪುಟ್ಟ ಮಗು ಇದ್ದು, ಪತಿ ಡಾ.ನೀರಜ್ ಅವರು ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಗಂಡ ಕೆಲಸಕ್ಕೆ ಹೋದ ಬಳಿಕ ಸೌಂದರ್ಯ 10 ಗಂಟೆಯ ವೇಳೆಗೆ ತನ್ನ ಕೋಣೆಯನ್ನು ಲಾಕ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಕೆಲಸದವರು ಬಂದಾಗ ಬಾಗಿಲು ತೆಗೆಯದಿದ್ದಾಗ ಸೌಂದರ್ಯ ಪತಿ ಡಾ. ನೀರಜ್‌ಗೆ ಕೆಲಸದವರು ಕರೆ ಮಾಡಿದ್ದರು. ಮನೆ ಕೆಲಸದವರು ಫೋನ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯ ಸರ್ಕಾರದ ಸಚಿವರನೇಕರು ಈಗಾಗಲೇ ಯಡಿಯೂರಪ್ಪ ಅವರ ಬೆಂಗಳೂರಿನ ಕೆಕೆ ರಸ್ತೆಯಲ್ಲಿರುವ ಕಾವೇರಿ ನಿವಾಸಕ್ಕೆ ಆಗಮಿಸಿದ್ದು, ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿರುವ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಸಾಂತ್ವನ ಹೇಳಲು ಬಿಎಸ್‌ವೈ ನಿವಾಸಕ್ಕೆ ದೌಡಾಯಿಸುತ್ತಿದ್ಧಾರೆ.

ಜಾಹೀರಾತು

Leave a Reply

You May Have Missed

error: Content is protected !!