ಕಡಬ: ವ್ಯಕ್ತಿಯೋರ್ವರ ಮೇಲೆ ಕಾಡಾನೆ ದಾಳಿ- ಗಂಭೀರ ಗಾಯ

ಕಡಬ: ವ್ಯಕ್ತಿಯೋರ್ವರ ಮೇಲೆ ಕಾಡಾನೆ ದಾಳಿ- ಗಂಭೀರ ಗಾಯ

ಕಡಬ ಸಮೀಪದ ಮೀನಾಡಿಯಲ್ಲಿ ಆನೆ ದಾಳಿಯಿಂದ ಇಬ್ಬರು ಮೃತಪಟ್ಟು ಮೂರು ತಿಂಗಳು ಕಳೆಯುತ್ತಿದ್ದಂತೆ ಐತ್ತೂರು ಗ್ರಾಮದಲ್ಲಿ ಮತ್ತೊಂದು ಆನೆ ದಾಳಿಯಾಗಿದ್ದು ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಐತ್ತೂರು ಗ್ರಾಮದ ಗೆರ್ತಿಲ‌ ನಿವಾಸಿ ಓಡಿ ಎಂಬವರ ಪುತ್ರ ಕೂಲಿ ಕಾರ್ಮಿಕ ಚೋಮ(56) ಎಂದು ಗುರುತಿಸಲಾಗಿದೆ.

ಇವರು ಶುಕ್ರವಾರ ಸಂಜೆ ಕೂಲಿ‌ ಕೆಲಸ ಬಿಟ್ಟು ಮನೆಯ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಗ್ರಾಮದ ನೆಲ್ಯಡ್ಕ ಶಾಲೆಗೆ ಹೊಂದಿಕೊಂಡಿರುವ ಕಾರ್ತಿಕೇಯ ಭಜನಾ ಮಂದಿರದ ಬಳಿ ಆನೆ ಹಠಾತ್ತಾಗಿ ಎದುರು ಬಂದು ಇವರನ್ನು‌ ಸೊಂಡಿಲಿನಿಂದ ಎತ್ತಿ ಬಿಸಾಕಿದೆ. ಪರಿಣಾಮ ಚೋಮ‌ ಗಂಭೀರ ಗಾಯಗೊಂಡಿದ್ದಾರೆ. ತಕ್ಚಣ ಇವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ‌ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಆನೆ ಪಕ್ಕದ ಕಾಡಿನಲ್ಲೇ ಬೀಡು ಬಿಟ್ಟಿದೆ ಎಂದು ತಿಳಿದು ಬಂದಿದೆ.

Leave a Reply

You May Have Missed

error: Content is protected !!