ಮಾರಕಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ

ಮಾರಕಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸ್ ಅಲಿಯಾಸ್ ಕೌನ್ಸಿಲರ್ ಸೀನಪ್ಪ ಅವರನ್ನು ಲಾಂಗು ಮತ್ತು ಮಚ್ಚುಗಳಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಶ್ರೀನಿವಾಸಪುರದಲ್ಲಿ ಆ.23ರ ಸೋಮವಾರ ಮಧ್ಯಾಹ್ನದ ನಡೆದಿದೆ.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ (62) ಹಲ್ಲೆಯಿಂದ ಸಾವನ್ನಪ್ಪಿದವರು.

ಶ್ರೀನಿವಾಸಪುರ ಹೊರವಲಯದಲ್ಲಿ ಮುಳಬಾಗಿಲು ರಸ್ತೆಯಲ್ಲಿ ತಾವೇ ನಿರ್ಮಿಸುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಕಟ್ಟಡದ ಸಮೀಪ ಈ ದೃಷ್ಕೃತ್ಯ ಜರುಗಿದೆ.

ಕೌನ್ಸಿಲರ್ ಸೀನಪ್ಪ ಅವರು ತಮ್ಮ ತೋಟವನ್ನು ವೀಕ್ಷಿಸಿಕೊಂಡು ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಬಳಿ ಬಂದಾಗ ಪರಿಚಿತರಂತೆ ಸೀನಪ್ಪ ಅವರನ್ನು ಮಾತನಾಡಿಸಲು ಬಂದು ಮುಖಕ್ಕೆ ಸ್ಪ್ರೇ ಸಿಂಪಡಿಸಿ ಮಚ್ಚು ಮತ್ತು ಲಾಂಗ್ ಗಳಿಂದ ಹಲವಾರು ಬಾರಿ ತಿವಿದಿದ್ದಾರೆ.

ಈ ಸಮಯದಲ್ಲಿ ಅಡ್ಡ ಬಂದ ಅಮರ್ ಎಂಬುವರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ತೀವ್ರ ಗಾಯಗೊಂಡು ಕುಸಿದುಬಿದ್ದ ಸೀನಪ್ಪ ಅವರನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಅವರ ಸಾವನ್ನು ದೃಢಪಡಿಸಲಾಗಿದೆ.

ಸೀನಪ್ಪ ಅವರು ಐದು ವರ್ಷದ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಶ್ರೀನಿವಾಸಪುರ ಕ್ಷೇತ್ರದಲ್ಲಿ ರಾಜಕೀಯ ದ್ವೇಷಕ್ಕೆ ಹಲವಾರು ಮಂದಿ ಬಲಿಯಾಗಿದ್ದು, ಸೀನಪ್ಪ ಅವರ ಕೊಲೆಯು ರಾಜಕೀಯ ದ್ವೇಷದಿಂದಲೇ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.

ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ.

Leave a Reply

You May Have Missed

error: Content is protected !!