ಸಂವಿಧಾನ ಜಾಗೃತಿ ಜಾಥಾಕ್ಕೆ ನೆಲ್ಯಾಡಿಯಲ್ಲಿ ಅದ್ದೂರಿ ಸ್ವಾಗತ

ಸಂವಿಧಾನ ಜಾಗೃತಿ ಜಾಥಾಕ್ಕೆ ನೆಲ್ಯಾಡಿಯಲ್ಲಿ ಅದ್ದೂರಿ ಸ್ವಾಗತ

ನೆಲ್ಯಾಡಿ:ಸಂವಿಧಾನದ ಅರಿವು ಮೂಡಿಸುವ ಉದ್ದೇಶದಿಂದ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಫೆ.20ರಂದು ನೆಲ್ಯಾಡಿಗೆ ಆಗಮಿಸಿದ್ದು, ನೆಲ್ಯಾಡಿ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಸಂಘ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.

ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸಂವಿಧಾನ ಜಾಗೃತಿ ಜಾಥಾ ವಾಹನಕ್ಕೆ ಸ್ವಾಗತ ಕೋರಲಾಯಿತು. ಸಂವಿಧಾನ ಜಾಗೃತಿ ಜಾಥಾ ವಾಹನದಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಜಿಲ್ಲಾಡಳಿತದ ಪರವಾಗಿ ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್ ಹಾಗೂ ಇತರ ಗಣ್ಯರು ಮಾಲಾರ್ಪಣೆ ಮಾಡಿದರು. ಬಳಿಕ ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ನೆಲ್ಯಾಡಿ ಗಾಂಧಿ ಮೈದಾನಕ್ಕೆ ಆಗಮಿಸಿತು.

ಗಾಂಧಿ ಮೈದಾನದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಡೆದ ಸಮಾರಂಭವನ್ನು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸಂವಿಧಾನ ರಚನೆ ದೊಡ್ಡ ಸವಾಲು ಆಗಿತ್ತು. ಇದನ್ನು ಸ್ವೀಕರಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದ ಅತೀದೊಡ್ಡ ಲಿಖಿತ ರೂಪದಲ್ಲಿ ಸಂವಿಧಾನ ನೀಡಿದ್ದಾರೆ. ಅಂಬೇಡ್ಕರ್ ಅವರು ರಚಿಸಿರುವಂತಹ ಸಂವಿಧಾನದ ಆಶಯವನ್ನು ಹಳ್ಳಿ ಹಳ್ಳಿಗೂ ಮುಟ್ಟಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು, ಗ್ರಾಮ ಪಂಚಾಯಿತಿನ ಸದಸ್ಯರಾದ ಜಯಾನಂದ ಬಂಟ್ರಿಯಾಲ್ ಅವರು ಮುತುವರ್ಜಿ ವಹಿಸಿ ಇತರೇ ಸದಸ್ಯರ ಸಹಕಾರದೊಂದಿಗೆ ಸುಮಾರು 22ರಷ್ಟು ವಿವಿಧ ಸಂಘ ಸಂಸ್ಥೆಯವರನ್ನು, ಶಿಕ್ಷಣ ಸಂಸ್ಥೆಯವರನ್ನು ಒಗ್ಗೂಡಿಸಿಕೊಂಡು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಕಾರಣಕರ್ತರಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಶಯದಂತೆ ನಾವೆಲ್ಲರೂ ಮುಂದುವರಿಯೋಣ ಎಂದರು. ಪ್ರಾಸ್ತಾವಿಕವಾಗಿ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕೃಷ್ಣ ಬಿ.ಅವರು ಮಾತನಾಡಿದರು.

ನೆಲ್ಯಾಡಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷೆ ರೇಷ್ಮಾಶಶಿ, ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ರೆ.ಫಾ.ಡಾ.ವರ್ಗೀಸ್ ಕೈಪುನಡ್ಕ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್, ಮುಖ್ಯ ಶಿಕ್ಷಕ ಮಹಾಲಿಂಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಚ್ಚೇರಿ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ನೆಲ್ಯಾಡಿ ಗ್ರಾಮ ಪಂಚಾಯಿತಿನ ಪ್ರಭಾರ ಪಿಡಿಒ ಆನಂದ ಗೌಡ ಸ್ವಾಗತಿಸಿದರು. ಶಿಕ್ಷಕಿ ಮಮತಾ ಸಿ.ಹೆಚ್., ಸಂವಿಧಾನ ಪೀಠಿಕೆ ವಾಚಿಸಿದರು. ಸದಸ್ಯ ಜಯಾನಂದ ಬಂಟ್ರಿಯಾಲ್ ವಂದಿಸಿದರು. ನೆಲ್ಯಾಡಿ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲಾ ಶಿಕ್ಷಕ, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರೂ ಆದ ಶಿಕ್ಷಕ ವಿಮಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನೆಲ್ಯಾಡಿ ನೆಲ್ಯಾಡಿ ಗ್ರಾಮ ಪಂಚಾಯಿತಿನ ಲೆಕ್ಕಸಹಾಯಕ ಅಂಗು, ನೆಲ್ಯಾಡಿ ಗ್ರಾಮ ಪಂಚಾಯಿತಿನ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸುರತ್ಕಲ್‌ನ ವಿಶ್ವನಾಥ ಶೆಟ್ಟಿ ನೇತೃತ್ವದ ಜಾನಪದ ಕಲಾತಂಡದವರಿಂದ ಬೀದಿ ನಾಟಕ ಪ್ರದರ್ಶನಗೊಂಡಿತು.

ಮೆರುಗು ನೀಡಿದ ಮೆರವಣಿಗೆ:
ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗ ರೆ.ಫಾ.ವರ್ಗೀಸ್ ಕೈಪುನಡ್ಕ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯೂ ಗೊಂಬೆಕುಣಿತ, ಬ್ಯಾಂಡ್ ಸೆಟ್, ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದೂವರೇ ಕಿ.ಮೀ. ತನಕ ನೆಲ್ಯಾಡಿ ಪೇಟೆಯ ಮೂಲಕ ಸಂವಿಧಾನ ಜಾಗೃತಿ ಜಾಥಾ ವಾಹನವು ಸಂಚರಿಸಿ ನೆಲ್ಯಾಡಿ ಗಾಂಧಿಮೈದಾನಕ್ಕೆ ಆಗಮಿಸಿತು. ಸರಕಾರಿ ಇಲಾಖೆಯವರು, ನೆಲ್ಯಾಡಿ ಗ್ರಾಮದ ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘಸಂಸ್ಥೆಯವರು, ಸರಕಾರಿ ಇಲಾಖೆಯವರು, ಜೆಸಿಐ ಸೇರಿದಂತೆ ಸುಮಾರು 22 ಸಂಘಸಂಸ್ಥೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Leave a Reply

You May Have Missed

error: Content is protected !!