ನೆಲ್ಯಾಡಿ: ಡಿವೈಡರ್‌ಗೆ ಬಸ್‌ ಡಿಕ್ಕಿ- 13ಪ್ರಯಾಣಿಕರಿಗೆ ಗಾಯ

KSRTC BUS

ನೆಲ್ಯಾಡಿ: ಡಿವೈಡರ್‌ಗೆ ಬಸ್‌ ಡಿಕ್ಕಿ- 13ಪ್ರಯಾಣಿಕರಿಗೆ ಗಾಯ

ನೆಲ್ಯಾಡಿ: ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿವೈಡರ್‌ಗೆ ಡಿಕ್ಕಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಹೆಚ್‌ಪಿ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ಎ.14ರಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಬಸ್ಸಿನಲ್ಲಿದ್ದ ದಂಪತಿ ಸಹಿತ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು 10 ಮಂದಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ವರದಿಯಾಗಿದೆ. ಕುಂದಾಪುರ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸು ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಬಸ್ಸಿನ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರ್‌ಗೆ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಹಾಸನದ ಪಾಳ್ಯ ನಿವಾಸಿ ದಂಪತಿಗಳಾದ ಚಂದ್ರು(68) ಹಾಗೂ ಅವರ ಪತ್ನಿ ಸರೋಜಾ (60) ಹಾಗೂ ಇನ್ನೊಬ್ಬರು ಪ್ರಯಾಣಿಕರು ಸೇರಿ ಮೂವರು ಗಂಭೀರ ಗಾಯಗೊಂಡಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದಂತೆ ಬಸ್ಸಿನ ಚಾಲಕ ಸಹಿತ 10 ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡಿದ್ದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

  •  

Leave a Reply

You May Have Missed

error: Content is protected !!