ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗೋಡೆಯಲ್ಲಿ ಬಿರುಕು: ಸುರಕ್ಷತೆ ಬಗ್ಗೆ ಗಂಭೀರ ಆತಂಕ


ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಂಗವಾಗಿ ನಿರ್ಮಿಸಲಾದ ಉಪ್ಪಿನಂಗಡಿಯ ತಡೆಗೋಡೆಯಲ್ಲಿ ಭಯಕಾರಿ ಬಿರುಕು ಕಾಣಿಸಿಕೊಂಡಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶಾಲಾ ರಸ್ತೆಯ ಪಕ್ಕದಲ್ಲೇ ಇರುವ ಈ ತಡೆಗೋಡೆ.
ಸುಮಾರು ಹದಿನೈದು ಅಡಿಗಿಂತಲೂ ಎತ್ತರ ಹೊಂದಿರುವ ಈ ತಡೆಗೋಡೆಯ ನಿರ್ಮಾಣದ ಸಮಯದಲ್ಲಿಯೇ ಸ್ಥಳೀಯ ಜಾಗೃತ ನಾಗರಿಕರು ಇದರ ಗುಣಮಟ್ಟವನ್ನು ಪ್ರಶ್ನಿಸಿದ್ದರೂ, ಅದು ತಂತ್ರಜ್ಞರ ಅನುಮೋದನೆಯೊಂದಿಗೆ ನಿರ್ವಹಿಸಲಾಗಿದೆ ಎಂಬ ಸ್ಪಷ್ಟನೆ ಅಧಿಕಾರಿಗಳಿಂದ ಸಿಕ್ಕಿತ್ತು. ಆದರೆ ಕಾಮಗಾರಿ ಪೂರ್ಣಗೊಂಡು ವರ್ಷವನ್ನೂ ದಾಟದಾಗಲೇ ತಡೆಗೋಡೆಯ ಮಧ್ಯಭಾಗದಲ್ಲೇ ಕಾಣಿಸಿಕೊಂಡಿರುವ ಬಿರುಕು, ಕಾಮಗಾರಿಯ ಗುಣಮಟ್ಟವನ್ನೇ ಪ್ರಶ್ನಿಸುವಂತೆ ಮಾಡಿದೆ.
ಇದೇ ರಸ್ತೆಯ ಇನ್ನೊಂದು ಬದಿಯಲ್ಲಿರುವ ತಡೆಗೋಡೆ ಎರಡು ವರ್ಷಗಳ ಹಿಂದೆ ಮಗುಚಿಬಿದ್ದಿತ್ತು. ಅದೃಷ್ಟವಶಾತ್ ಅದು ಜನರಿಲ್ಲದ ಕೃಷಿಭೂಮಿಗೆ ಮುಗುಚಿದ ಕಾರಣ ಯಾವುದೇ ಹಾನಿಯಾಗಿರಲಿಲ್ಲ. ಆದರೆ ಈಗ ಬಿರುಕು ಮೂಡಿರುವ ತಡೆಗೋಡೆ ಶಾಲಾ ಮಕ್ಕಳ ದೈನಂದಿನ ಸಂಚಾರದ ರಸ್ತೆಯ ಪಕ್ಕದಲ್ಲಿರುವುದರಿಂದ ಈ ಬಾರಿಗೆ ಸಂಭವಿಸಬಹುದಾದ ಅನಾಹುತ ಭೀಕರವಾಗಿರಬಹುದು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ನಡೆದ ಕೆಲ ತಿಂಗಳಲ್ಲೇ ಈ ರೀತಿಯ ಬಿರುಕು ಕಾಣಿಸಿರುವುದು ಕಾಮಗಾರಿಯ ಗುಣಮಟ್ಟವನ್ನು ಶಂಕಿಸುವಂತೆ ಮಾಡಿದೆ. ಮುಖ್ಯವಾಗಿ ಶಾಲಾ ಮಕ್ಕಳ ಸಂಚಾರದ ರಸ್ತೆಯಲ್ಲಿರುವ ಈ ತಡೆಗೋಡೆಯ ಬಿರುಕಿನ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕು. ಜನರ ಸುರಕ್ಷತೆಯ ವಿಚಾರದಲ್ಲಿ ಯಾವುದನ್ನೂ ಲಘುವಾಗಿ ಪರಿಗಣಿಸಬೇಡಿ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತಡೆಗೋಡೆಯ ಪರಿಸ್ಥಿತಿಯನ್ನು ಸ್ಥಳದಲ್ಲೇ ವೀಕ್ಷಿಸಿದ ಗುತ್ತಿಗೆದಾರ ಸಂಸ್ಥೆ ಕೆಎನ್‍ಆರ್ ಇಂಜಿನಿಯರಿಂಗ್‌ನ ಯೋಜನಾಧಿಕಾರಿ ಮಹೇಂದ್ರ ಕುಮಾರ್ ಸಿಂಗ್ ಅವರು, “ಈ ಬಿರುಕು ತಡೆಗೋಡೆ ನಿರ್ಮಾಣದ ಸಂದರ್ಭದಲ್ಲಿ ಹಲಗೆ ಅಳವಡಿಸುವ ವೇಳೆ ಉಂಟಾದ ತಾತ್ಕಾಲಿಕ ವ್ಯತ್ಯಯದಿಂದ ಮೂಡಿರಬಹುದು. ಮೇಲ್ನೋಟಕ್ಕೆ ಇದು ಅಪಾಯಕಾರಿಯಲ್ಲದಿದ್ದರೂ, ಸಂಪೂರ್ಣ ಕಾಮಗಾರಿಯನ್ನು ಮತ್ತೆ ಪರಿಶೀಲನೆಗೆ ಒಳಪಡಿಸಲಾಗುತ್ತದೆ” ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.




























Leave a Reply