RCB ಸಂಭ್ರಮಾಚರಣೆ ವೇಳೆ ಸೂತಕ| ಕಾಲ್ತುಲಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆ

Bangalore

RCB ಸಂಭ್ರಮಾಚರಣೆ ವೇಳೆ ಸೂತಕ| ಕಾಲ್ತುಲಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ದುರಂತದಲ್ಲಿ ಕೊನೆಗೊಂಡಿದೆ. ನೆಚ್ಚಿನ ತಂಡದ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಮತ್ತು ಆಟಗಾರರನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳ ನಡುವೆ ಉಂಟಾದ ತೀವ್ರ ನೂಕುನುಗ್ಗಲಿನಿಂದಾಗಿ ಓರ್ವ ಮಹಿಳೆ ಸಹಿತ 11 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.

ನಗರದ ವಿವಿಧೆಡೆಯಿಂದ ಸಾವಿರಾರು ಯುವಕ-ಯುವತಿಯರು ಕ್ರೀಡಾಂಗಣದತ್ತ ಧಾವಿಸಿದ್ದರು. ಕ್ರೀಡಾಂಗಣದ ಗೇಟ್ ನಂಬರ್ 18, 19, ಮತ್ತು 20 ತೆರೆಯುತ್ತಿದ್ದಂತೆ, ಒಳನುಗ್ಗಲು ಯತ್ನಿಸಿದ ಅಭಿಮಾನಿಗಳ ನಡುವೆ ತಳ್ಳಾಟ ಮತ್ತು ನೂಕುನುಗ್ಗಲು ಉಂಟಾಯಿತು. ಇದೇ ವೇಳೆ, ಆರ್‌ಸಿಬಿ ಆಟಗಾರರು ಆಗಮಿಸುವ ನಿರೀಕ್ಷೆಯಿದ್ದ ಗೇಟ್ ನಂಬರ್ 12ರ ಬಳಿಯೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನಸಂದಣಿಯಿಂದಾಗಿ ಪರಿಸ್ಥಿತಿ ಕೈಮೀರಿತು.

ಈ ನೂಕುನುಗ್ಗಲಿನಲ್ಲಿ ಅಸ್ವಸ್ಥಗೊಂಡ ಹಲವರ ಪೈಕಿ, ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಹಾಗೂ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ 11 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನೂಕುನುಗ್ಗಲಿನ ಸಂದರ್ಭದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಅಸ್ವಸ್ಥಗೊಂಡು ಕುಸಿದುಬಿದ್ದಿದ್ದು, ಅವರನ್ನು ತಕ್ಷಣ ಕಾರಿನಲ್ಲಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಅಲ್ಲದೆ, ಗೇಟ್ ನಂಬರ್ 6ರ ಬಳಿ ಯುವಕನೋರ್ವ ಗೇಟ್ ಹತ್ತಲು ಯತ್ನಿಸಿ ಕಾಲು ಮುರಿದುಕೊಂಡಿರುವ ಘಟನೆಯೂ ವರದಿಯಾಗಿದೆ.

ಈ ಅನಿರೀಕ್ಷಿತ ಘಟನೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗಿ, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾರ್ವಜನಿಕರು ಪರದಾಡುವಂತಾಯಿತು.

  •  

Leave a Reply

You May Have Missed

error: Content is protected !!