ಕಾಯರ್ತಡ್ಕ ಕುಂಬಾರ ಸೇವಾ ಸಂಘದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ


ಕೊಕ್ಕಡ: ಕಾಯರ್ತಡ್ಕ ಕುಂಬಾರ ಸೇವಾ ಸಂಘ ಇದರ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ ಕುಂಬಾರ ಸೇವಾ ಘಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂವಪ್ಪ ಕುಂಬಾರ ವಹಿಸಿದ್ದರು. ವೇದಿಕೆಯಲ್ಲಿ ಕುಂಬಾರ ಸೇವಾ ಸಂಘದ ಗೌರವಾಧ್ಯಕ್ಷರಾದ ಸಂಜೀವ ಕುಂಬಾರ ಕಾಯರ್ತಡ್ಕ, ಸೇವಾ ಸಂಘದ ಅಧ್ಯಕ್ಷರಾದ ಗಣೇಶ್ ಕುಂಬಾರ, ಗ್ರಾ.ಪಂ ಸದಸ್ಯೆ ಲಲಿತಾಕ್ಷಿ, ಶಾಲಾ ಶಿಕ್ಷಕಿ ವೇದಾವತಿ. ಕುಂಭಶ್ರೀ ಗೆಳೆಯರ ಬಳಗದ ಕಾರ್ಯದರ್ಶಿ ಹರೀಶ್ ಎಂ, ಕಾಯರ್ತಡ್ಕದ ಕುಂಬಾರ ಸಮಾಜದ ಪ್ರಮುಖರಾದ ರಾಘವ ಎಂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಂದರಿಂದ ಹತ್ತನೇ ತರಗತಿಯ ವರೆಗಿನ ಸ್ವಜಾತಿ ಬಾಂಧವರ ಸುಮಾರು 34 ಮಂದಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದುವರೆಗೆ ಒಂದು ವರ್ಷಗಳಲ್ಲಿ ಊರ ಮತ್ತು ಪರವೂರರಿಗೆ ಅನಾರೋಗ್ಯದ ನಿಮಿತ್ತ, ವಿದ್ಯಾಭ್ಯಾಸಕ್ಕಾಗಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸುಮಾರು 60 ಸಾವಿರ ಮೊತ್ತವನ್ನು ಸಹಾಯಧನವನ್ನಾಗಿ ನೀಡಲಾಗಿದ್ದು, ಈ ಹಿಂದೆ ಖಾದಿ ಗ್ರಾಮೋದ್ಯೋಗ ಸಂಸ್ಥೆಯಿಂದ 20 ಜನರಿಗೆ ತರಬೇತಿಯನ್ನು ನೀಡಿದ್ದು ಇದರ ಪ್ರಮಾಣ ಪತ್ರವನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಪುದುವೆಟ್ಟು ಶಾಲೆಯ ಶಿಕ್ಷಕಿ ವೇದವತಿ ಅವರು ವಿದ್ಯೆಯ ಮಹತ್ವ ಮತ್ತು ಹೆಚ್ಚು ಅಂಕಗಳನ್ನು ಪಡೆಯಲು ಯಾವ ರೀತಿ ಪ್ರಯತ್ನ ಪಡಬೇಕು ಎಂಬುದನ್ನು ತಿಳಿಸಿದರು. ಕುಂಬಾರ ಸೇವಾ ಸಂಘದ ಗೌರವಾಧ್ಯಕ್ಷರಾದ ಸಂಜೀವ ಕುಂಬಾರ ಅವರು ಮಾತನಾಡಿ ಕುಂಬಾರ ಸೇವಾ ಸಂಘ ಪ್ರಾರಂಭವಾಗಿದ್ದು ಮೊದಲು ಕಾಯರ್ತಡ್ಕದಿಂದಲೇ ಎಂದು ಹೆಮ್ಮೆಯಿಂದ ತಿಳಿಸಿದರು ಹಾಗೂ ದೈವದೇವರ ಆಚರಣೆ ಹಿಂದೆ ಹೇಗೆ ಮಾಡುತ್ತಿದ್ದರು ಮತ್ತು ಈಗ ಹೇಗೆ ಮಾಡುತ್ತಿದ್ದಾರೆ ಅದನ್ನು ತಿದ್ದಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು.
ಕುಂಬಾರ ಸೇವಾ ಸಂಘದ ಅಧ್ಯಕ್ಷ ಗಣೇಶ್ ಕುಂಬಾರ ಮಾತನಾಡಿ ಕುಂಬಾರ ಸೇವಾ ಸಂಘದ ಏಳಿಗೆಗೆ ಕುಂಭಶ್ರೀ ಗೆಳೆಯರ ಬಳಗ ಸಹಕಾರದಿಂದ ಸಾಧ್ಯವಾಗುತ್ತದೆ. ಎಲ್ಲರ ಸಹಕಾರ ಎಂದೆಂದೂ ಇರಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳ ಪ್ರಾರ್ಥನ ಗೀತೆಯ ಮೂಲಕ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂತೋಷ್ ಕುಂಬಾರ ವರದಿಯನ್ನು ಮಂಡಿಸಿದರು, ಯಶೋಧರ ಕುಂಬಾರ ಸ್ವಾಗತಿಸಿದರು. ವಿಜಯ್ ಕೆ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ವಂದಿಸಿದರು.




























Leave a Reply