ಕಡಬ ತಾಲೂಕು ಮಟ್ಟದ ಪಿಯುಸಿ ಕ್ರೀಡಾಕೂಟ: ರಾಮಕುಂಜ ಮತ್ತು ಬೆಥನಿ ಕಾಲೇಜುಗಳು ಚಾಂಪಿಯನ್

ನೆಲ್ಯಾಡಿ

ಕಡಬ ತಾಲೂಕು ಮಟ್ಟದ ಪಿಯುಸಿ ಕ್ರೀಡಾಕೂಟ: ರಾಮಕುಂಜ ಮತ್ತು ಬೆಥನಿ ಕಾಲೇಜುಗಳು ಚಾಂಪಿಯನ್

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಡಬ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ ಹಾಗೂ ಬಾಲಕಿಯರ ಕ್ರೀಡಾಕೂಟವು ಅ.26ರಂದು ಹಿರೆಬಂಡಾಡಿ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಭರ್ಜರಿಯಾಗಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಹಿರೆಬಂಡಾಡಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಸೌಕತ್ ಅಲಿ ನೆರವೇರಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಅವರು ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವದ ಕುರಿತು ಮನದಟ್ಟು ಮಾಡಿಸಿದರು.

ಉಪ್ಪಿನಂಗಡಿ ಸಹಕಾರ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ ಹಾಗೂ ಬ್ಯಾಂಕಿನ ನಿರ್ದೇಶಕ ಪ್ರಕಾಶ್ ರೈ ಬೆಳ್ಳಿಪಾಡಿ ಮಾತನಾಡಿ ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇದು ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜಾರ್ಜ್ ಪಿಯು ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ. ವಹಿಸಿ ಮಾತನಾಡಿ ತರಗತಿಯಲ್ಲಿ ಸಿಗುವ ಪಾಠದ ಜೊತೆಗೆ ಕ್ರೀಡೆಯೂ ಸಮಾನ ಮಹತ್ವ ಪಡೆಯಬೇಕು. ಇಂದಿನ ದಿನಗಳಲ್ಲಿ ಕ್ರೀಡಾಂಗಣದಿಂದಲೇ ಅನೇಕರು ಸರ್ಕಾರಿ ಹುದ್ದೆಗಳಿಗೆ ಏರಿದ್ದಾರೆ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯೇ ನಿಜವಾದ ಕ್ರೀಡಾಸ್ಫೂರ್ತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರೆಬಂಡಾಡಿಯ ಅಂತರಾಷ್ಟ್ರೀಯ ಕ್ರೀಡಾಪಟು ಸಿಂಚನ ಮಠಂದೂರು ಅವರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕ ಚೇತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಹಮ್ಮದ್ ಹ್ಯಾರಿಸ್ ವಂದಿಸಿದರು.

ಕ್ರೀಡಾಕೂಟದ ಫಲಿತಾಂಶ:
ಬಾಲಕಿಯರ ವಿಭಾಗದಲ್ಲಿ ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜು ಮತ್ತು ಬಾಲಕರ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಚಾಂಪಿಯನ್‌ಗಳಾಗಿ ಆಯ್ಕೆಗೊಂಡರು.

  •  

Leave a Reply

You May Have Missed

error: Content is protected !!