ಕೊಕ್ಕಡ:ಬೆಳ್ತಂಗಡಿ ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಕೊಕ್ಕಡ ಶಾಖೆ ಹೊಸ ಕಟ್ಟಡಕ್ಕೆ ಸ್ಥಳಾಂತರ ಉದ್ಘಾಟನೆ


ಕೊಕ್ಕಡ: ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ, ಉಜಿರೆ ಇದರ ಕೊಕ್ಕಡ ಶಾಖೆಯು ಶ್ರೀದೇವಿ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಿದೆ. ಹೊಸ ಶಾಖೆಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರು ಹಾಗೂ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ದೀಪ ಬೆಳಗಿಸಿ ನೆರವೇರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ರಬ್ಬರ್ ಬೆಳೆಗಾರರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಘದ ಕೊಕ್ಕಡ ಶಾಖೆ ಹೊಸ ಕಟ್ಟಡದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ, ಯಶಸ್ವಿಯಾಗಿ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಟ್ಟಡದ ಮಾಲಕರಾದ ವಸಂತ ರಾವ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ. ಭಿಡೆ ಅವರು ಅಧ್ಯಕ್ಷತೆ ವಹಿಸಿದ್ದು,
ಸಂಘದ ನಿರ್ದೇಶಕರುಗಳಾದ ಗ್ರೇಶಿಯನ್ ವೇಗಸ್, ಕೆ.ಬಾಲಕೃಷ್ಣ ಗೌಡ, ಹೆಚ್. ಪದ್ಮಗೌಡ, ಕೆ.ಜೆ.ಆಗಸ್ಟಿನ್, ರಾಮ ನಾಯ್ಕ್, ಭೈರಪ್ಪ, ಹರೀಶ್ ರಾವ್, ಭರತ್ ಕುಮಾರ್ ಹೆಚ್., ಹಾಗೂ ಶಾಜಿ ಪಿ. ಎ. ಉಪಸ್ಥಿತರಿದ್ದರು.
ಶಾಖೆಯ ಪ್ರಬಂಧಕ ಸಂದೇಶ್ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು. ಉಪಾಧ್ಯಕ್ಷ ಅನಂತ ಭಟ್ ಎಂ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ವಂದಿಸಿದರು.





















Leave a Reply