ಎಲ್‌ಪಿಜಿ ದರ ಏರಿಕೆ ಖಂಡಿಸಿ ನೆಲ್ಯಾಡಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಎಲ್‌ಪಿಜಿ ದರ ಏರಿಕೆ ಖಂಡಿಸಿ ನೆಲ್ಯಾಡಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಎಲ್‌ಪಿಜಿ ದರ ಏರಿಕೆ ಖಂಡಿಸಿ ನೆಲ್ಯಾಡಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಮಹಿಳೆಯರ ಸಂಕಷ್ಟವನ್ನು ಗಮನಿಸಿ ತಕ್ಷಣ ದರ ಇಳಿಕೆ ಮಾಡಬೇಕು- ಉಷಾ ಅಂಚನ್

 

ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಗ್ರಾಮೀಣ ನೇತೃತ್ವದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್, ಕಡಬ ಮಹಿಳಾ ಬ್ಲಾಕ್ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಕಡಬ ಬ್ಲಾಕ್, ಯೂತ್ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರ ಹಾಗೂ ನೆಲ್ಯಾಡಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯನ್ನು ಖಂಡಿಸಿ ಬುಧವಾರ ನೆಲ್ಯಾಡಿ ಸಂತೆಕಟ್ಟೆ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ವಿಭಿನ್ನವಾಗಿ ಆರಂಭಿಸಿದ ಕಾರ್ಯಕರ್ತರು ಕಟ್ಟಿಗೆಯಿಂದ ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಬಡ ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ. ವಿದ್ಯುತ್ ಎಷ್ಟು ಅಗತ್ಯವೋ ಅದೇ ರೀತಿ ಎಲ್‌ಪಿಜಿ ಗ್ಯಾಸ್ ಕೂಡ ಅತ್ಯಾವಶ್ಯಕ. ಆರಂಭದಲ್ಲಿ ₹400ರಲ್ಲಿದ್ದ ಗ್ಯಾಸ್ ದರ ಈಗ ಸಾವಿರದ ಗಡಿ ದಾಟಿದೆ. ಉಚಿತ ಗ್ಯಾಸ್ ಎಂಬ ಹೆಸರಿನಲ್ಲಿ ಜನರನ್ನು ಮರುಳು ಮಾಡಲಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಇಂದು ಸ್ವಲ್ಪ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಜನರನ್ನು ಬೀದಿಗೆ ತಳ್ಳುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಪ್ರಧಾನಿಯವರ ನಿರ್ಧಾರಗಳಿಂದ ಜನರ ಮೇಲೆ ಭಾರ ಹೆಚ್ಚಾಗಿದೆ. ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಿಂದ ಸಾಮಾನ್ಯರ ಬದುಕು ಇನ್ನಷ್ಟು ಕಷ್ಟಕರವಾಗಿದೆ. ಕೇಂದ್ರದಲ್ಲಿ ಈ ಸರ್ಕಾರ ಇರುವವರೆಗೆ ಜನರಿಗೆ ನೆಮ್ಮದಿ ಇಲ್ಲ ಎಂದು ಕಿಡಿಕಾರಿದರು.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷೆ ಉಷಾ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಿಂದ ಮನೆಯ ಅಡುಗೆ ಮನೆಗೆ ದೊಡ್ಡ ಹೊಡೆತ ಬಿದ್ದಿದೆ. ಮನೆ ನಡೆಸುವ ಮಹಿಳೆಯರೇ ಇದರ ನಿಜವಾದ ಹೊರೆ ಹೊರುತ್ತಿದ್ದಾರೆ. ದಿನನಿತ್ಯದ ಜೀವನ ಸಾಗಿಸುವುದೇ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ತೋರಿಸುತ್ತಿಲ್ಲ. ಮಹಿಳೆಯರ ಸಂಕಷ್ಟವನ್ನು ಗಮನಿಸಿ ತಕ್ಷಣ ದರ ಇಳಿಕೆ ಮಾಡಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಪಿ.ಪಿ ವರ್ಗೀಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರಸ್ವತಿ ಕಾಮತ್, ಮಂಗಳೂರು ಮಾಜಿ ಮೇಯರ್ ನಮಿತಾ, ಭಾನುಭಾಸ್ಕರ, ವಂದನ ಸೇರಿದಂತೆ ಹಲವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಭೂ ನ್ಯಾಯ ಮಂಡಳಿ ಸದಸ್ಯ ಕೆ.ಪಿ ಅಬ್ರಹಾಂ, ಕಡಬ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಶ್ರಫ್ ಶೇಡಿಗುಂಡಿ, ಶಿರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾರ್ತಿಕೇಯನ್, ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಗಂಗಾಧರ ಶೆಟ್ಟಿ, ಮಾಜಿ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್, ಉಷಾ ಜೋಯಿ, ಜೋಸ್ ಮಾತಾ, ಶಾಲಿನಿ ಸತೀಶ್ ನಾಯಕ್, ಅವಿನಾಶ್, ಎ.ಕೆ ಬಶೀರ್, ಬಾಲಕೃಷ್ಣ ಬಳ್ಳೇರಿ, ವಿಜಯ್ ಕುಮಾರ್, ಪೂವಪ್ಪ ಕರ್ಕೇರ, ಜಾರ್ಜ್ ಕುಟ್ಟಿ, ಆಶಾ ಲಕ್ಷ್ಮಣ್, ಶಿವಪ್ರಕಾಶ್, ಜಿಮ್ಮಿ, ಇಸ್ಮಾಯಿಲ್ ಕೋಲ್ಪೆ, ಯತೀಶ್ ಬಾನಡ್ಕ, ಸತೀಶ್ಚಂದ್ರ ಶೆಟ್ಟಿ, ಸುರೇಶ್ ಬಂಟ್ವಾಳ, ಇಸ್ಮಾಯಿಲ್ ನೋಟರಿ ವಕೀಲರು, ನೆಲ್ಯಾಡಿ ಸೇರಿದಂತೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸರ್ವೋತ್ತಮ ಗೌಡ ಸ್ವಾಗತಿಸಿದರು. ಅಶ್ರಫ್ ಶೇಡಿಗುಂಡಿ ವಂದಿಸಿದರು.

 

Leave a Reply

You May Have Missed

error: Content is protected !!