ನೆಲ್ಯಾಡಿ: ಮುರಿಯೇಲು ಸೇತುವೆಗೆ ಗುದ್ದಲಿ ಪೂಜೆ – 25ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ






ನೆಲ್ಯಾಡಿ: ಗೋಳಿತ್ತೊಟ್ಟು-ಪುರ-ಮುರಿಯೇಲು ಮೂಲಕ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನಕ್ಕೆ ಹೋಗುವ ರಸ್ತೆಯ ಮುರಿಯೇಲು ಎಂಬಲ್ಲಿ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಏ.11ರಂದು ಬೆಳಿಗ್ಗೆ ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಜಿ.ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಜಿ.ಅವರು, ಐತ್ತೂರುನಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಬಿದಿರಿನ ಪಾಪುನಲ್ಲಿ ತೋಡು ದಾಟುತ್ತಿದ್ದ ಫೋಟೋ ತೆಗೆದು ಅದನ್ನು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತಂದು ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕೇಳಿಕೊಂಡಿದ್ದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು, ಅಧಿಕಾರಿಗಳಿಗೆ ಹೇಳಿ ಒಂದೇ ವಾರದಲ್ಲಿ 1 ಕೋಟಿ ರೂ.ಅನುದಾನ ಮಂಜೂರುಗೊಳಿಸಿದ್ದಾರೆ.
ಈ ಅನುದಾನದಲ್ಲಿ ಗೋಳಿತ್ತೊಟ್ಟು ಗ್ರಾಮದ ಮುರಿಯೇಲು, ಕೊಯಿಲ ಗ್ರಾಮದ ಬಡ್ಡಮೆ, ಐತ್ತೂರಿನಲ್ಲಿ 2 ಕಾಮಗಾರಿಗಳು ನಡೆಯಲಿದೆ. 1 ವಾರದೊಳಗೆ ಈ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಳೆಗಾಲ ಆರಂಭಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಮತ್ತೆ 10 ಕೋಟಿ ರೂ.ಅನುದಾನ ನೀಡುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭರವಸೆ ನೀಡಿದ್ದಾರೆ. ಉಪಚುನಾವಣೆಯಿಂದಾಗಿ ಅನುದಾನ ಬಿಡುಗಡೆ ವಿಳಂಬ ಆಗಿದೆ ಎಂದು ಕೃಷ್ಣಪ್ಪ ಹೇಳಿದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ಅವರ ಮನವಿ ಮೇರೆಗೆ ಮುರಿಯೇಲು ಅಲ್ಲಿ ಸೇತುವೆ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರು ತಕ್ಷಣ ಕಾಮಗಾರಿ ಆರಂಭಿಸಿ ಮಳೆಗಾಲ ಆರಂಭಕ್ಕೆ ಮೊದಲು ಕಾಮಗಾರಿ ಮುಗಿಸಿಕೊಡಬೇಕು. ಕಾಮಗಾರಿಯೂ ಗುಣಮಟ್ಟದಿಂದ ಕೂಡಿರಬೇಕೆಂದು ಜಿ.ಕೃಷ್ಣಪ್ಪ ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ಅವರು ಮಾತನಾಡಿ, ಇಲ್ಲಿ ಕಾಲು ಸಂಕ ಆದರೂ 3 ಮೀ.ಅಗಲದಲ್ಲಿ ನಿರ್ಮಾಣ ಆಗಲಿದೆ. ಇದರಿಂದ ಸಣ್ಣ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ. ಇಲ್ಲಿ ಸೇತುವೆ ಆಗಬೇಕೆಂಬ ಬೇಡಿಕೆ ಬಹಳಷ್ಟು ದಿನಗಳಿಂದ ಇತ್ತು. ಇದೀಗ ಕೆಪಿಸಿಸಿ ಸದಸ್ಯರಾದ ಕೃಷ್ಣಪ್ಪ ಜಿ.ಅವರ ಸಹಕಾರದಿಂದ ಅನುದಾನ ಮಂಜೂರು ಆಗಿದೆ. ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವಲ್ಲಿ ಜಿ.ಕೃಷ್ಣಪ್ಪ ಅವರು ಸಹಕಾರ ನೀಡುತ್ತಿದ್ದಾರೆ. ಗುತ್ತಿಗೆದಾರರು 2 ತಿಂಗಳಲ್ಲಿ ಈ ಕಾಮಗಾರಿ ಮುಗಿಸಿ ಈ ಭಾಗದ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಅಬ್ಬಾಸ್ ಕೋಚಕಟ್ಟೆ ಅವರು ಮಾತನಾಡಿ, ಕೆಪಿಸಿಸಿ ಸದಸ್ಯರಾದ ಕೃಷ್ಣಪ್ಪ ಅವರು ಸುಳ್ಯ ಕ್ಷೇತ್ರದೆಲ್ಲೆಡೆ ಸಂಚಾರ ಮಾಡಿ ಅಗತ್ಯವಿರುವಲ್ಲಿ ರಸ್ತೆ ಹಾಗೂ ಇತರೇ ಮೂಲಭೂತ ಸೌಕರ್ಯ ಒದಗಿಸುತ್ತಿದ್ದಾರೆ. ಕೃಷ್ಣಪ್ಪ ಜಿ.ಅವರು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತರೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವುದರಿಂದ ಅವರು ಗೆದ್ದಂತೆ. ಊರಿನ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕೃಷ್ಣಪ್ಪ ಅವರಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಭೂ ನ್ಯಾಯ ಮಂಡಳಿ ಸದಸ್ಯ ಅಬ್ರಹಾಂ ಕೆ.ಪಿ., ಅಕ್ರಮ ಸಕ್ರಮ ಸಮಿತಿ ಸದಸ್ಯ ಆದಂ ಕಾಜರೊಕ್ಕು, ಬಿನುಚಾಕೋ, ಗುತ್ತಿಗೆದಾರ ಕಾರ್ತಿಕ್, ಸ್ಥಳೀಯರಾದ ನಾಗಪ್ಪ ಗೌಡ ಪೆರ್ಲ, ದೇವಕಿ ಪೆರ್ಲ, ರವಿಪ್ರಕಾಶ್ ಪೆರ್ಲ, ದಿನೇಶ್ ಪೆರ್ಲ, ಆರತಿ ಪೆರ್ಲ, ಸ್ಮಿತಾ ಪೆರ್ಲ, ಅದಿತಿ ಪೆರ್ಲ, ಜಶ್ಮಿಕಾ ಪೆರ್ಲ, ಜಯಕರ ಕಲ್ಲಂಡ, ಸತ್ಯವತಿ ಕಲ್ಲಂಡ, ದೇವಾಂಶಿ ಕಲ್ಲಂಡ, ಹೊನ್ನಪ್ಪ ಕಲ್ಲಂಡ, ಕುಸುಮಾವತಿ ಕಲ್ಲಂಡ, ಮಿಥುನ ಮುರಿಯೇಲು ಮತ್ತಿತರರು ಉಪಸ್ಥಿತರಿದ್ದರು. ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ ಸ್ವಾಗತಿಸಿ, ಮಾಜಿ ಸದಸ್ಯ ಪುರುಷೋತ್ತಮ ಗುರುಂಪು ವಂದಿಸಿದರು.



















Leave a Reply