ನೆಲ್ಯಾಡಿ ಸರ್ವಿಸ್ ರಸ್ತೆ ಅವ್ಯವಸ್ಥೆ: ಸಣ್ಣ ಮಳೆಯಲ್ಲೇ ಕೆರೆಯಾದ ರಸ್ತೆ

ನೆಲ್ಯಾಡಿ ಸರ್ವಿಸ್ ರಸ್ತೆ ಅವ್ಯವಸ್ಥೆ: ಸಣ್ಣ ಮಳೆಯಲ್ಲೇ ಕೆರೆಯಾದ ರಸ್ತೆ

ನೆಲ್ಯಾಡಿ ಸರ್ವಿಸ್ ರಸ್ತೆ ಅವ್ಯವಸ್ಥೆ: ಸಣ್ಣ ಮಳೆಯಲ್ಲೇ ಕೆರೆಯಾದ ರಸ್ತೆ

ಅಪಾಯದ ಹೊಂಡಗಳಿಗೆ ವಾಹನ ಸವಾರರ ಆಕ್ರೋಶ – ಗುತ್ತಿಗೆದಾರರ ವಿರುದ್ಧ ನೆಲ್ಯಾಡಿ ಸೋಶಿಯಲ್ ಡೆಮೋಕ್ರಟಿಕ್ ಆಟೋ ಯೂನಿಯನ್ ನಿಂದ ಪ್ರತಿಭಟನೆ

 

ನೆಲ್ಯಾಡಿ ಸರ್ವಿಸ್ ರಸ್ತೆ ಅವ್ಯವಸ್ಥೆ: ಸಣ್ಣ ಮಳೆಯಲ್ಲೇ ಕೆರೆಯಾದ ರಸ್ತೆ

ನೆಲ್ಯಾಡಿ: ನೆಲ್ಯಾಡಿಯ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಸಂಪೂರ್ಣ ಹದಗೆಟ್ಟು ಸಣ್ಣ ಮಳೆಯಲ್ಲೇ ಕೆರೆಯ ರೂಪ ಪಡೆದುಕೊಂಡಿದ್ದು, ವಾಹನ ಸವಾರರ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಯ ಮಧ್ಯಭಾಗದಲ್ಲಿ ಮೊಣಕಾಲಿನ ಮಟ್ಟದ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿದ್ದು, ಗುರುವಾರದಂದು ಸಂಜೆ ಸುರಿದ ಮಳೆಗೆ ಮಳೆ ನೀರು ತುಂಬಿಕೊಂಡ ಪರಿಣಾಮ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಬೈಕ್, ಆಟೋರಿಕ್ಷಾ, ಕಾರು ಸೇರಿದಂತೆ ವಿವಿಧ ವಾಹನಗಳು ಓಡಾಡುತ್ತಿವೆ. ಆದರೆ ಮಳೆಯ ನೀರಿನಿಂದ ಹೊಂಡಗಳು ಗೋಚರಿಸದ ಕಾರಣ ಯಾವುದೇ ಕ್ಷಣದಲ್ಲಿ ಭೀಕರ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಪ್ರಕಾರ, ಮಳೆಗಾಲ ಆರಂಭವಾಗುವುದಕ್ಕೂ ಮುನ್ನವೇ ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಗುತ್ತಿಗೆ ಪಡೆದ ಕೆಎನ್‌ಆರ್ ಕಂಪನಿಯ ಇಂಜಿನಿಯರ್‌ಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ತಾತ್ಕಾಲಿಕ ದುರಸ್ತಿ ಕಾರ್ಯವಾದರೂ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದೀಗ ಕೇವಲ ಒಂದು ಸಣ್ಣ ಮಳೆಯಲ್ಲೇ ರಸ್ತೆ ಸಂಪೂರ್ಣ ನೀರಿನಿಂದ ತುಂಬಿ ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಸುರಿದ ಮಳೆಯಿಂದ ಸರ್ವಿಸ್ ಸರ್ಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ನೆಲ್ಯಾಡಿ ಸೋಶಿಯಲ್ ಡೆಮೋಕ್ರಟಿಕ್ ಆಟೋ ಯೂನಿಯನ್ ಸದಸ್ಯರು ಸ್ಥಳಕ್ಕೆ ಆಗಮಿಸಿ ವಾಹನ ಸವಾರರಿಗೆ ಮುಂಜಾಗ್ರತಾ ಕ್ರಮವಾಗಿ ಅಪಾಯಕಾರಿ ಹೊಂಡಗಳ ಮಧ್ಯೆ ಬ್ಯಾರಿಕೇಡ್ ಅಳವಡಿಸಿದರು.

ಇದರ ಜೊತೆಗೆ ರಸ್ತೆ ಬದಿಯ ಮೋರಿಗಳಲ್ಲಿ ತುಂಬಿಕೊಂಡಿದ್ದ ಕಸವನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು. ಬಳಿಕ ಸಂಬಂಧಪಟ್ಟ ಗುತ್ತಿಗೆದಾರರ ಇಂಜಿನಿಯರ್‌ಗಳನ್ನು ಸ್ಥಳಕ್ಕೆ ತುರ್ತಾಗಿ ಕರೆಸಿ ಪರಿಸ್ಥಿತಿ ಅವಲೋಕಿಸುವಂತೆ ಒತ್ತಾಯಿಸಿದರು.

ಈ ವೇಳೆ ಆಕ್ರೋಶಗೊಂಡ ಯೂನಿಯನ್ ಸದಸ್ಯರು ಗುತ್ತಿಗೆದಾರರ ವಾಹನವನ್ನು ತಡೆದು ಪ್ರತಿಭಟನೆ ನಡೆಸಿ, ತಕ್ಷಣ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

 

Leave a Reply

You May Have Missed

error: Content is protected !!