ಕೊಕ್ಕಡ: ಉಚಿತ ಆರೋಗ್ಯ ತಪಾಸಣಾ ಶಿಬಿರ: 130 ಮಂದಿ ಫಲಾನುಭವಿಗಳಿಗೆ ಸೇವೆ

ಕೊಕ್ಕಡದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: 130 ಮಂದಿ ಫಲಾನುಭವಿಗಳಿಗೆ ಸೇವೆ

ಕೊಕ್ಕಡ: ಉಚಿತ ಆರೋಗ್ಯ ತಪಾಸಣಾ ಶಿಬಿರ: 130 ಮಂದಿ ಫಲಾನುಭವಿಗಳಿಗೆ ಸೇವೆ

ಕ್ಯಾನ್ಸರ್ ಹಾಗೂ ಹೃದಯರೋಗಗಳ ಆರಂಭಿಕ ಪತ್ತೆಗೆ ತಪಾಸಣೆ ಅಗತ್ಯ – ಡಾ. ಪ್ರಕಾಶ್ ಬಿ

 

ಕೊಕ್ಕಡದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: 130 ಮಂದಿ ಫಲಾನುಭವಿಗಳಿಗೆ ಸೇವೆ

ಕೊಕ್ಕಡ: ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಶಾಖೆ, ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕೊಕ್ಕಡ ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಪ್ರಕಾಶ್ ಬಿ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಜೀವನಶೈಲಿ ಸಂಬಂಧಿತ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುವುದು ಅಗತ್ಯವಾಗಿದೆ ಎಂದು ಹೇಳಿದರು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದರೆ ಚಿಕಿತ್ಸೆ ಸುಲಭವಾಗುವುದರ ಜೊತೆಗೆ ಜೀವ ಉಳಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯರ ಸೇವೆ ತಲುಪಿಸುವ ಉದ್ದೇಶದಿಂದ ಇಂತಹ ಶಿಬಿರಗಳು ಅತ್ಯಂತ ಉಪಯುಕ್ತವಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ತುಷಾರ ಕುಮಾರಿ ಮಾತನಾಡಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕನಿಷ್ಠ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಹಿಳೆಯರು ಹಾಗೂ ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದ್ದು, ಸರ್ಕಾರ ಹಾಗೂ ವಿವಿಧ ಸಂಸ್ಥೆಗಳು ಆಯೋಜಿಸುವ ಉಚಿತ ಶಿಬಿರಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ. ಚೈತ್ರಾ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರೀಜನಲ್ ಕೋ-ಆರ್ಡಿನೇಟರ್ ರಂಜನ್, ವೈದ್ಯರಾದ ಡಾ. ನಿರೀಕ್ಷೆ ಹಾಗೂ ಡಾ. ರೇಷ್ಮಾ ಉಪಸ್ಥಿತರಿದ್ದರು.

ಶಿಬಿರದಲ್ಲಿ ಕ್ಯಾನ್ಸರ್ ತಜ್ಞರು, ಹೃದ್ರೋಗ ತಜ್ಞರು ಸೇರಿದಂತೆ ವಿವಿಧ ವಿಭಾಗಗಳ ಪರಿಣಿತ ವೈದ್ಯರು ಭಾಗವಹಿಸಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸಿದರು. ಸ್ತನದಲ್ಲಿ ಗೆಡ್ಡೆ ಅಥವಾ ಕಿಬ್ಬೊಟ್ಟೆಯಲ್ಲಿ ಮಾಂಸದ ಮುದ್ದೆಯಂತಹ ಊತ, ಮುಟ್ಟಿನ ಬಳಿಕ ದೀರ್ಘಕಾಲದ ರಕ್ತಸ್ರಾವ ಅಥವಾ ಬಿಳಿ ಮುಟ್ಟು, ಮರುಕಳಿಸುವ ಕೆಮ್ಮು, ಒರಟು ಧ್ವನಿ, ಆಹಾರ ನುಂಗಲು ತೊಂದರೆ, ಕೆನ್ನೆ ಅಥವಾ ನಾಲಿಗೆಯಲ್ಲಿ ಗುಣವಾಗದ ಹುಣ್ಣು, ಅಜೀರ್ಣ, ಹಸಿವು ಕಡಿಮೆಯಾಗುವುದು, ಹೊಟ್ಟೆ ಕಸಿವಿಸಿ, ದೇಹದ ತೂಕದಲ್ಲಿ ಗಣನೀಯ ಇಳಿಕೆ, ರಕ್ತಹೀನತೆ, ಆಗಾಗ ಕಾಣುವ ಸೋಂಕುಗಳು, ಮೂಳೆ ನೋವು ಹಾಗೂ ರಕ್ತಸ್ರಾವದ ಲಕ್ಷಣಗಳಿರುವವರಿಗೆ ವಿಶೇಷ ತಪಾಸಣೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಲಾಯಿತು.

ಇದೇ ವೇಳೆ ಹುಟ್ಟಿನಿಂದಲೇ ಇರುವ ಹೃದಯದ ಸಮಸ್ಯೆಗಳು, ಹೃದಯದ ರುಮ್ಯಾಟಿಕ್ ಕಾಯಿಲೆಗಳು, ಹೃದಯದ ಪರಿಧಮನಿಯ ತೊಂದರೆಗಳು ಹಾಗೂ ಬೈಪಾಸ್ ಅಥವಾ ತೆರೆದ ಹೃದಯದ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೂ ತಜ್ಞ ವೈದ್ಯರಿಂದ ಪರಿಶೀಲನೆ ಮತ್ತು ಸೂಕ್ತ ಮಾರ್ಗದರ್ಶನ ನೀಡಲಾಯಿತು.

ಶಿಬಿರದಲ್ಲಿ ಉಚಿತ ಇಸಿಜಿ ಪರೀಕ್ಷೆ, ಮಹಿಳೆಯರಿಗೆ ಉಚಿತ ಪ್ಯಾಪ್ ಸ್ಮಿಯರ್ ಹಾಗೂ ಮ್ಯಾಮೋಗ್ರಾಂ ಪರೀಕ್ಷೆ, ಚರ್ಮರೋಗ, ಹಲ್ಲಿನ ತಪಾಸಣೆ, ಕಿವಿ-ಮೂಗು-ಗಂಟಲು (ಇಎನ್‌ಟಿ) ಪರೀಕ್ಷೆ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.

ಒಟ್ಟು 130 ಮಂದಿ ಫಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಂಡು ತಜ್ಞ ವೈದ್ಯರಿಂದ ಆರೋಗ್ಯ ಸಲಹೆ ಹಾಗೂ ಚಿಕಿತ್ಸೆ ಕುರಿತ ಮಾರ್ಗದರ್ಶನ ಪಡೆದರು.

ಶಿಬಿರದ ಯಶಸ್ಸಿಗೆ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸಹಕರಿಸಿದರು.

 

Leave a Reply

You May Have Missed

error: Content is protected !!