ಶಿಶಿಲ: ನೂತನ ಮಳೆ ಮಾಪನ ಯಂತ್ರ ಅಳವಡಿಕೆ










ಶಿಶಿಲ: ಕಳೆದ ಎರಡು ವರ್ಷಗಳಿಂದ ಶಿಶಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಮಾಪನ ಯಂತ್ರ ಕಾರ್ಯನಿರ್ವಹಿಸದೇ ಇರುವುದರಿಂದ ರೈತರು ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ಕೃಷಿ ಇಲಾಖೆಯು ಸೋಮವಾರ ನೂತನ ಮಳೆ ಮಾಪನ ಯಂತ್ರವನ್ನು ಅಳವಡಿಸುವ ಮೂಲಕ ಈ ಭಾಗದ ರೈತರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದೆ.
ಮಳೆ ಮಾಪನ ಯಂತ್ರ ಕಾರ್ಯನಿರ್ವಹಿಸದಿರುವುದರಿಂದ ಈ ಭಾಗದಲ್ಲಿ ಸುರಿದ ಮಳೆಯ ಅಧಿಕೃತ ದಾಖಲೆ ಲಭ್ಯವಾಗದೆ, ಬೆಳೆ ವಿಮೆ ಯೋಜನೆಯಡಿ ರೈತರಿಗೆ ದೊರಕಬೇಕಿದ್ದ ಪರಿಹಾರದ ಮೊತ್ತ ಅತ್ಯಂತ ಕಡಿಮೆಯಾಗಿ ಜಮೆಯಾಗುತ್ತಿದೆ ಎಂಬ ಆರೋಪವನ್ನು ರೈತರು ಹಲವು ಬಾರಿ ವ್ಯಕ್ತಪಡಿಸಿದ್ದರು. ಇದರಿಂದ ನೂರಾರು ರೈತರು ಆರ್ಥಿಕ ನಷ್ಟ ಅನುಭವಿಸಿದ್ದು, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನವೂ ವ್ಯಕ್ತವಾಗಿತ್ತು.
ಈ ಗಂಭೀರ ಸಮಸ್ಯೆಯ ವರದಿ ಪ್ರಕಟಿಸಿ, ರೈತರ ಸಂಕಷ್ಟವನ್ನು ಬೆಳಕಿಗೆ ತಂದಿತ್ತು. ಬಳಿಕ ಇತ್ತೀಚೆಗೆ ನಡೆದ ಶಿಶಿಲ ಗ್ರಾಮಸಭೆಯಲ್ಲಿಯೂ ಮಳೆ ಮಾಪನ ಯಂತ್ರ ಎರಡು ವರ್ಷಗಳಿಂದ ಕಾರ್ಯನಿರ್ವಹಿಸದೇ ಇರುವ ವಿಚಾರ ಪ್ರಮುಖ ಚರ್ಚೆಗೆ ಗ್ರಾಸವಾಗಿತ್ತು. ಗ್ರಾಮಸ್ಥರು ಹಾಗೂ ರೈತರು ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿ, ಮಳೆ ದಾಖಲೆಗಳ ಕೊರತೆಯಿಂದ ಬೆಳೆ ವಿಮೆ ಪರಿಹಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣವೇ ನೂತನ ಯಂತ್ರ ಅಳವಡಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದ್ದರು.
ಗ್ರಾಮಸಭೆಯಲ್ಲಿ ವ್ಯಕ್ತವಾದ ಆಕ್ಷೇಪ ಹಾಗೂ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಕ್ರಮ ಕೈಗೊಂಡು ಸೋಮವಾರ ಹೊಸ ಮಳೆ ಮಾಪನ ಯಂತ್ರವನ್ನು ಅಳವಡಿಸಿದೆ. ಇದರಿಂದ ಇನ್ನು ಮುಂದೆ ಶಿಶಿಲ ವ್ಯಾಪ್ತಿಯಲ್ಲಿ ಸುರಿಯುವ ಮಳೆಯ ನಿಖರ ಮಾಹಿತಿ ದಾಖಲೆಯಾಗಲಿದ್ದು, ಬೆಳೆ ವಿಮೆ ಸೇರಿದಂತೆ ವಿವಿಧ ಕೃಷಿ ಯೋಜನೆಗಳಿಗೆ ಅಗತ್ಯವಾಗಿರುವ ಅಧಿಕೃತ ಮಳೆ ದಾಖಲೆ ಲಭ್ಯವಾಗಲಿದೆ ಎಂಬ ವಿಶ್ವಾಸ ರೈತರಲ್ಲಿ ಮೂಡಿದೆ.


















Leave a Reply