ಬೊಲೇರೋ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಯಾತ್ರಾರ್ಥಿ ಸಾವು

ಬೊಲೇರೋ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಯಾತ್ರಾರ್ಥಿ ಸಾವು

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ಯಾತ್ರಾರ್ಥಿಗಳ ಬೊಲೇರೋ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ಗಾಡಿಯಲ್ಲಿದ್ದ ಮಂಡ್ಯ ಜಿಲ್ಲೆಯ ಚೆನ್ನಸಂದ್ರ ನಿವಾಸಿ ಮಹಾದೇವ (62) ಸಾವನ್ನಪ್ಪಿದ ಘಟನೆ ನವೆಂಬರ್ 23ರಂದು ಸಂಜೆಯ ವೇಳೆ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಸಂಭವಿಸಿದೆ.

ಘಟನೆಯ ವಿವರ: ಮಂಡ್ಯ ಮೂಲದ 10 ಮಂದಿ ಯಾತ್ರಾರ್ಥಿಗಳು ಬೋಲೇರೋ ವಾಹನದಲ್ಲಿ ಧನ್ವಂತರಿ ಕ್ಷೇತ್ರ ಕೊಕ್ಕಡ, ಸೌತಡ್ಕ, ಶಿಶಿಲೇಶ್ವರ ದೇವಾಲಯಗಳಿಗೆ ತೆರಳಿ ಅಲ್ಲಿ ಸೇವೆಯನ್ನು ಸಲ್ಲಿಸಿ ಧರ್ಮಸ್ಥಳಕ್ಕೆ ಪ್ರಯಾಣಿಸುವ ವೇಳೆ, ಕುದ್ರಾಯ ಸಮೀಪ ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಹಣ್ಣು ಸೇವನೆಗಾಗಿ ಕೆಳಗಿಳಿದಿದ್ದರು. ಈ ಸಂದರ್ಭ ಧರ್ಮಸ್ಥಳದಿಂದ ಕೊಕ್ಕಡ ಮಾರ್ಗವಾಗಿ ಮೈಸೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ಸು ಚಾಲಕನ ನಿರ್ಲಕ್ಷದಿಂದ ಯಾತ್ರಾರ್ಥಿಗಳಿಗೆ ಹಾಗೂ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಯಾತ್ರಾರ್ಥಿಗಳಲ್ಲೊಬ್ಬರಾದ ಮಹಾದೇವ ಎನ್ನುವವರಿಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಐದು ಮಹಿಳೆಯರು, ಓರ್ವ ಗಂಡಸು, ಒಂದು ಮಗು ಸೇರಿ ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪ್ರಕರಣವು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

You May Have Missed

error: Content is protected !!