ಗ್ರಾ ಪಂ ವ್ಯಾಪ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರ






ಬೆಳ್ತಂಗಡಿ, ಮಾ.8: ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದ್ದು, ಭ್ರಷ್ಟಾಚಾರಿಗಳ ವಿರುದ್ಧ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಎಚ್ಚರಿಕೆ ನೀಡಿದ್ದಾರೆ.

ಅವರು ಮಂಗಳವಾರ ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಕಾಮಗಾರಿಗಳನ್ನು ವೀಕ್ಷಿಸಿ ಬಳಿಕ ಪಂಚಾಯತ್ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಆಡಳಿತದಲ್ಲಿ ಗ್ರಾಮ ಪಂಚಾಯತ್ ನಿಂದ ಹಿಡಿದು ರಾಜ್ಯ ಸರಕಾರದ ವರೆಗೂ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು, ಎಲ್ಲಾ ಕಡೆಗಳಲ್ಲೂ ಭ್ರಷ್ಟರು ತುಂಬಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೊಂದು ಕಾಮಗಾರಿಗೆ ಎರಡೆರಡು ಬಿಲ್ಲು ಮಾಡಲಾಗಿದೆ. ಸಾರ್ವಜನಿಕರು ನಡೆಸಿದ ಕಾಮಗಾರಿಗೆ ಪಂಚಾಯತ್ ಬಿಲ್ ಮಾಡಿರುವುದು, ಪ.ಜಾತಿ/ಪಂಗಡಗಳ ಅನುದಾನ ದುರುಪಯೋಗ, ಸೋಲಾರ್ ನೀಡದೆ ವಂಚನೆ, ವಿಕಲಚೇತನರ ಹೆಸರಿನಲ್ಲೂ ಭ್ರಷ್ಟಾಚಾರ ಸೇರಿದಂತೆ ಹತ್ತಾರು ಕಾಮಗಾರಿಗಳಲ್ಲಿ ನಕಲಿ ಬಿಲ್ ಮಾಡಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ವಸಂತ ಬಂಗೇರ ಗಂಭೀರ ಆರೋಪ ಮಾಡಿದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ಬಿಜೆಪಿ ಮಂತ್ರಿಗಳಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರು ಬಡವರ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಬಿಜೆಪಿ ಸುಲಿಗೆಕೋರರ ಪಕ್ಷವೆಂದು ಆರೋಪಿಸಿದ ಅವರು, ಒಂದು ಪಂಚಾಯತ್ ನಲ್ಲಿ 20 ಲಕ್ಷಕ್ಕೂ ಹೆಚ್ಚು ರೂಪಾಯಿ ಭ್ರಷ್ಟಾಚಾರ ನಡೆದರೆ ತಾಲೂಕಿನ ಇನ್ನಿತರ ಬಿಜೆಪಿ ಆಡಳಿತದ ಪಂಚಾಯತ್ ಗಳಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿರಬಹುದು ಎಂದು ಪ್ರಶ್ನಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿವಿಧ ಭ್ರಷ್ಟಾಚಾರಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾರನ್ನು ಮಾಜಿ ಶಾಸಕ ವಸಂತ ಬಂಗೇರ ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರು ತಮ್ಮ ವಾರ್ಡ್ ನ ಸಮಸ್ಯೆಗಳನ್ನು ಮುಂದಿಟ್ಟು ಪಂಚಾಯತ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ವ್ಯವಸ್ಥಾಪಕ ಪ್ರಶಾಂತ್ ಬಳೆಂಜ ಅವರಿಗೆ ಮನವಿ ಸಲ್ಲಿಸಲಾಯಿತು
ಇಂದಬೆಟ್ಟು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಜಯರಾಂ ಗೌಡ ಬಂಗಾಡಿ. ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ. ಗೌಡ, ಶೈಲೇಶ್ ಕುಮಾರ್ , ಪದಾಧಿಕಾರಿಗಳಾದ ಅಭಿನಂದನ್ ಹರೀಶ್ ಕುಮಾರ್, ಅನಿಲ್ ಪೈ, ಭರತ್ ಕುಮಾರ್, ಅಶ್ವಥ್ ರಾಜ್ ಇಂದಬೆಟ್ಟು, ತಾಪಂ ಮಾಜಿ ಸದಸ್ಯ ಗಣೇಶ್ , ಕಾರ್ಮಿಕ ಘಟಕದ ಸುರೇಶ್ ಇಂಚರ, ಗ್ರಾಮ ಪಂಚಾಯತ್ ಸದಸ್ಯ ವೀರಪ್ಪ ಮೊಯ್ಲಿ, ಅಬ್ದುಲ್ ಸಮದ್, ರಾಜೇಶ್ , ಪ್ರವೀಣ್ ಗೌಡ ವಿ.ಜಿ., ಮಧುಕರ ಸುವರ್ಣ, ರವಿ , ನಾರಾಯಣ ಟಿ. , ಎಲಿಯಮ್ಮ , ಅಜಯ್ ಎ.ಜೆ. ಉಪಸ್ಥಿತರಿದ್ದರು.














Leave a Reply