ಅಪರಿಚಿತರಿಂದ ಬೆದರಿಕೆ:ದೂರು ದಾಖಲು

ಅಪರಿಚಿತರಿಂದ ಬೆದರಿಕೆ:ದೂರು ದಾಖಲು

ಧರ್ಮಸ್ಥಳ ಸಮೀಪದ ಕನ್ಯಾಡಿಯಲ್ಲಿ ರಾತ್ರಿಯ ವೇಳೆ‌ ಬೈಕಿನಲ್ಲಿ ಬಂದ ತಂಡವೊಂದು ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಕಾರಿನಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಅಬ್ದುಲ್ ಫಾರುಕ್, ಮೈಮುನಾ,ಸೌಧಾ, ಮೈಮುನಾ ಸಿದ್ದಿಕ್ ಹಾಗೂ ಮಕ್ಕಳು ಉಜಿರೆಯ ಸಂಬಂಧಿಕರ ಮನೆಗೆ ಹೋಗಿ ರಾತ್ರಿ 11.30ರ ಸುಮಾರಿಗೆ ಧರ್ಮಸ್ಥಳದತ್ತ ಹಿಂತಿರುಗುತ್ತಿದ್ದ ವೇಳೆ ಕನ್ಯಾಡಿ ಶಾಲೆಯ ಸಮೀಪ ಎರಡು ಬೈಕ್ ಗಳಲ್ಲಿ ಬಂದ ಮೂವರು ಕಾರನ್ನು ತಡೆದು ಕಾರು ಚಾಲಕನ ಮೇಲೆ ಹಲ್ಲೆನಡೆಸಿ ಕಾರಿನ ಕೀಯನ್ನು ಕಸಿದುಕೊಂಡಿದ್ದಾನೆ. ಅಲ್ಲದೆ ಕಾರಿನ ಇನ್ನೊಂದು ಬದಿಯ ಡೋರ್ ನ್ನು ಬಲವಂತವಾಗಿ ತೆರೆದ ಆರೋಪಿಗಳು ಮಹಿಳೆಯರ ಮೇಲೆ ಕೈಮಾಡಿ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ ವರ್ತಿಸಿದ್ದಲ್ಲದೆ ಕಾರಿನಲ್ಲಿದ್ದವರ ಕೈಯಲ್ಲಿದ್ದ ಮೊಬೈಲ್ ಅನ್ನು ಕಸಿದುಕೊಂಡು ಎಸೆದು ಹಾನಿಗೊಳಿಸಿದ್ದಾರೆ. ಅಲ್ಲದೆ ಕಾರಿನ ಮೇಲೂ ಕಾಲಿನಿಂದ ತುಳಿದಿದ್ದಾರೆ.

ಈ ವೇಳೆ ಕಾರಿನಲ್ಲಿದ್ದವರು ಬೊಬ್ಬೆ ಹಾಕಿದ್ದು ದಾರಿಯಲ್ಲಿ ಬಂದ ಪರಿಚಯದವರು ವಾಹನ ನಿಲ್ಲಿಸಿ ಜಗಳ ಬಿಡಿಸಿದ್ದಾರೆ. ಈ ವೇಳೆ ಆರೋಪಿಗಳು ಮೂವರೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

You May Have Missed

error: Content is protected !!