ಧರ್ಮಸ್ಥಳ ಪೊಲೀಸ್ ಠಾಣೆಗೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ದಿಡೀರ್ ಭೇಟಿ





ಧರ್ಮಸ್ಥಳ : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಎಸ್. ಕೋಸಂಬೆ ಅವರು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣೆಗೆ ದಿಡೀರ್ ಭೇಟಿ ನೀಡಿ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ನಿರ್ದೇಶನಗಳನ್ನು ನೀಡಿದರು.
ಪೊಲೀಸ್ ಠಾಣೆಯಲ್ಲಿ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ನಿರ್ವಹಣೆ, ದಾಖಲೆ ಸಂಗ್ರಹಣೆ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿಯನ್ನು ಪರಿಶೀಲಿಸಿದ ಅವರು, ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರತಿ ಗುರುವಾರ ಕಡ್ಡಾಯವಾಗಿ “ತೆರೆದ ಮನೆ” ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳಿಗೆ ಅವರ ಹಕ್ಕುಗಳು ಹಾಗೂ ಕಾನೂನುಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಕಾನೂನು ಸಂಘರ್ಷಕ್ಕೆ ಒಳಗಾಗುವ ಮಕ್ಕಳನ್ನು ಜುವೆನೈಲ್ ಜಸ್ಟಿಸ್ ಬೋರ್ಡ್ ಮುಂದೆ ಹಾಜರುಪಡಿಸುವಾಗ ಫಾರಂ ನಂ.1 ಅನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ಇದೇ ವೇಳೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಕ್ಕಳನ್ನು ಸಮಾಲೋಚನೆಗೆ ಕರೆದೊಯ್ಯುವ ಸಂದರ್ಭಗಳಲ್ಲಿ ಫಾರಂ ನಂ.17 ಅನ್ನು ತಪ್ಪದೇ ಭರ್ತಿ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಕ್ಕಳ ಅಪಹರಣ, ಪೋಕ್ಸೋ ಪ್ರಕರಣ, ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ–2015ರ ಕಲಂ 107 ಹಾಗೂ ಮಕ್ಕಳ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಮಾದರಿ ನಿಯಮ–2016ರ ನಿಯಮ 8(6) ಮತ್ತು 86(11) ಅನ್ವಯವಾಗಿ ಪದನಿಮಿತ್ತ ಅಧಿಕಾರಿಗಳ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಗಳೊಂದಿಗೆ ಮಾಹಿತಿ ಫಲಕವನ್ನು ಪೊಲೀಸ್ ಠಾಣೆಯಲ್ಲಿ ಪ್ರದರ್ಶಿಸಬೇಕು. ಜೊತೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ಶಾಶ್ವತ ಫಲಕದಲ್ಲಿ ತಕ್ಷಣ ಅಳವಡಿಸುವಂತೆ ಸೂಚನೆ ನೀಡಿದರು.
ಭೇಟಿಯ ಸಂದರ್ಭದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಸಮರ್ಥ ಗಾಣಿಗೇರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.




















Leave a Reply