ಕೊಕ್ಕಡ: ಕಾಡಾನೆಗಳ ದಾಳಿ ತೀವ್ರ: ವಾಹನಗಳಿಗೂ ಹಾನಿ – ಜನರಲ್ಲಿ ಆತಂಕದ ವಾತಾವರಣ

ಕೊಕ್ಕಡ: ಕಾಡಾನೆಗಳ ದಾಳಿ ತೀವ್ರ: ವಾಹನಗಳಿಗೂ ಹಾನಿ – ಜನರಲ್ಲಿ ಆತಂಕದ ವಾತಾವರಣ

ಕೊಕ್ಕಡ: ಕಾಡಾನೆಗಳ ದಾಳಿ ತೀವ್ರ: ವಾಹನಗಳಿಗೂ ಹಾನಿ – ಜನರಲ್ಲಿ ಆತಂಕದ ವಾತಾವರಣ

 

ಕೊಕ್ಕಡ : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿರುವ ಘಟನೆಗಳು ಸರಣಿ ರೀತಿಯಲ್ಲಿ ವರದಿಯಾಗುತ್ತಿವೆ. ಕೃಷಿ ತೋಟಗಳು, ಮನೆಗಳ ಸುತ್ತಮುತ್ತ ಸಂಚರಿಸುತ್ತಿರುವ ಕಾಡಾನೆಗಳು ಇದೀಗ ವಾಹನಗಳ ಮೇಲೂ ದಾಳಿ ನಡೆಸುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಮಾ.28ರಂದು ರಾತ್ರಿ ತೆಂಕುಬೈಲು ಪ್ರದೇಶದಲ್ಲಿ ಕಾಡಾನೆ ಸಂಚರಿಸುವ ವೇಳೆ ಯಶವಂತ ಅವರ ತೋಟದ ಕೆಲಸದ ಕಾರ್ಮಿಕನಿಗೆ ಸೇರಿದ ನಿಲ್ಲಿಸಿದ್ದ ಮಾರುತಿ ಕಾರಿನ ಮೇಲೆ ದಾಳಿ ನಡೆಸಿ ಕಾರನ್ನು ಜಖಂಗೊಳಿಸಿದ ಘಟನೆ ನಡೆದಿದೆ. ಅದೇ ರೀತಿ ಮಾ.29ರಂದು ಮುಂಡೂರುಪಳಿಕೆ ಸಮೀಪದ ಸಂಕುಬೈಲು ಪ್ರದೇಶದಲ್ಲಿ ಸೇಸಪ್ಪ ಗೌಡ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೂ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿದೆ. ಇದಲ್ಲದೆ, ಹಲವು ಕಡೆಗಳಲ್ಲಿ ಬಾಳೆ, ತೆಂಗು, ಅಡಿಕೆ ಹಾಗೂ ಭತ್ತದ ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಅಪಾರ ಹಾನಿ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಎರಡನೇ ಬಾರಿ ಭೇಟಿ ನೀಡಿ ಸಂತ್ರಸ್ತರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸರಕಾರದಿಂದ ದೊರೆಯುವ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವನ್ನು ನಿಯೋಜಿಸಲಾಗಿದ್ದು, ಸುಬ್ಬಯ್ಯ ನಾಯಕ್ ಅವರು ರಾತ್ರಿ ಇಡೀ ತಂಡದೊಂದಿಗೆ ಇದ್ದು ಮಾರ್ಗದರ್ಶನ ನೀಡುತ್ತಿದ್ದಾರೆ.

ಅರಣ್ಯ ಇಲಾಖೆಗೆ ಒತ್ತಾಯ
ಕಾಡಾನೆಗಳ ಉಪಟಳದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮೊದಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಿರಂತರ ಪಹರೆ, ಶಾಶ್ವತ ಪರಿಹಾರ ಕ್ರಮಗಳು ಹಾಗೂ ಕಾಡಾನೆಗಳ ಚಲನವಲನ ನಿಯಂತ್ರಣಕ್ಕೆ ತಕ್ಷಣದ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಇದರೊಂದಿಗೆ, ಅರಣ್ಯ ಇಲಾಖೆ ಕೂಡ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಜಾಗ್ರತೆ ವಹಿಸಲು ಸೂಚನೆ ನೀಡಿದ್ದು, ವಿಶೇಷವಾಗಿ ರಾತ್ರಿ ವೇಳೆ ಮತ್ತು ಕಾಡು ಪ್ರದೇಶಗಳ ಸಮೀಪ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದೆ.

ಕೊಕ್ಕಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಭೀತಿ ಮರುಕಳಿಸಿದ್ದು, ಜನರು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದು ಈಗ ಅತಿ ಅವಶ್ಯಕವಾಗಿದೆ.

 

Previous post

SSLC Maths Exam: ಪರೀಕ್ಷೆಯಲ್ಲಿ ಪಠ್ಯ ಹೊರತಾದ ಪ್ರಶ್ನೆ? 21 ಅಂಕಗಳ ಕಠಿಣ ಪ್ರಶ್ನೆ | ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ

Next post

ನೆಲ್ಯಾಡಿ: ಸಂತ ಅಲ್ಫೋನ್ಸ ಕ್ಷೇತ್ರದಲ್ಲಿ ನೂತನ ವಿಕಾರ್ ಜೆನರಲ್ ಫಾ.ಡಾ.ಮಾಣಿ ವೆಳುತ್ತೇಡತ್ತ್ ಪರಂಭಿಲ್ ಗೆ ಸನ್ಮಾನ

Leave a Reply

You May Have Missed

error: Content is protected !!